ಮೈಸೂರು: ನಗರ ಮತ್ತು ಗ್ರಾಮಾಂತರ ಬಿಜೆಪಿ ಘಟಕಗಳ ವತಿಯಿಂದ ಇಲ್ಲಿನ ರಾಜೇಂದ್ರ ಕಲಾಮಂದಿರದಲ್ಲಿ ಬುಧವಾರ ನಡೆದ ಮತದಾರರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿ ಮತದಾರನು ತಮ್ಮ ಮತ ಗೆಲ್ಲಬೇಕು ಎಂದು ಬಯಸುತ್ತಾರೆ. ಈಗ ಪ್ರತಿ ಮತದಾರನ ಅಭಿಪ್ರಾಯ ಬಹಳ ಮುಖ್ಯ. ನವ ಕರ್ನಾಟಕದ ನಿರ್ಮಾಣಕ್ಕೆ ಬಿಜೆಪಿ ಜಾತಿ, ಮತ, ಪಂಥಗಳನ್ನು ಮೀರಿ ಮೈ.ವಿ.ರವಿಶಂಕರ್ ಅವರನ್ನು ಕಣಕ್ಕಿಳಿಸಿದ್ದು, ಹೊಸ ಬದಲಾವಣೆಗೆ ಮುನ್ನುಡಿ ಬರೆಯಲು ಪ್ರಜ್ಞಾವಂತ ಮತದಾರರು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಮತದಾರರು ಜಾಗೃತರಾಗಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಮೈ.ವಿ.ರವಿಶಂಕರ್ ಪರವಾದ ಅಲೆ ಇದೆ. ಜಾತಿ, ಮತ, ಪಂಥ ಮೀರಿ ಚುನಾವಣೆ ನಡೆಯುತ್ತಿದೆ. ರಾಷ್ಟ್ರಪ್ರೇಮಿ ನರೇಂದ್ರ ಮೋದಿ ದಕ್ಷ ಆಡಳಿತವನ್ನು ಪದವೀಧರರು ಮೆಚ್ಚಿದ್ದಾರೆ. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಪರಾಭವಗೊಂಡಿರುವ ಮೈ.ವಿ.ರವಿಶಂಕರ್ ಅವರು ಹೆಚ್ಚಿನ ಮತಗಳ ಅಂತರದಿಂದ ಜಯಶೀಲರಾಗಲಿದ್ದಾರೆ. ಬಿಜೆಪಿಯ ಅಭಿವೃದ್ಧಿಯ ಪರ್ವಕ್ಕೆ ಬಲ ತುಂಬಲಿದ್ದಾರೆ ಎಂದು ಹೇಳಿದರು.
ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ ಅನುದಾನ ನೀಡಲಾಗಿದೆ. ಅಂತರ ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಮೈಸೂರಿನಲ್ಲಿ ಉದ್ಯಮ, ಶಿಕ್ಷಣ ಸಂಸ್ಥೆ ಆರಂಭಿಸಬೇಕು. ಅದಕ್ಕೆ ಪೂರಕ ವಾತಾವರಣ ನಿರ್ಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅಲ್ಲದೇ, ಮೈಸೂರಿನಲ್ಲಿ ಇಂಡಸ್ಟ್ರಿಯಲ್ ಟೌನ್ ಮಾಡಬೇಕೆಂಬ ತೀರ್ಮಾನ ಇದೆ ಎಂದು ನುಡಿದರು.
1.5 ಲಕ್ಷ ಯುವಕರಿಗೆ ತರಬೇತಿ: ರಾಜ್ಯದಲ್ಲಿ 1.5 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. 'ಉದ್ಯಮಿಯಾಗು ಉದ್ಯೋಗ ನೀಡು' ಕಾರ್ಯಕ್ರಮ ಮಾಡಿದ್ದೇವೆ. ಕೃಷಿ ವಲಯ, ಉತ್ಪಾದನಾ ವಲಯ, ಸೇವಾ ವಲಯ ಉತ್ತೇಜಿಸಲಾಗುತ್ತಿದೆ. ಯುವಕರಿಗೆ ಯೋಜನೆ ರೂಪಿಸಿ ಹಣಕಾಸಿನ ನೆರವು ನೀಡಲಾಗುವುದು ಎಂದು ಹೇಳಿದರು.
ಆತ್ಮನಿರ್ಭರ ಭಾರತ ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನೇಕ ಅವಕಾಶಗಳನ್ನು ತೆರೆದಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 7 ಸಾವಿರ ಶಾಲಾ ಕೊಠಡಿ ನಿರ್ಮಾಣಕ್ಕೆ ಚಿಂತನೆ ಮಾಡಿದ್ದೇವೆ. ವಿಧಾನ ಪರಿಷತ್ತಿನಲ್ಲಿ ನಮ್ಮ ಬಲಪಡಿಸಲು ಮೈ.ವಿ.ರವಿಶಂಕರ್ ಅವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.
ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕಾಂಗ್ರೆಸ್ ಈ ತನಕ ಟೇಕಾಫ್ ಆಗಿಲ್ಲ. ಸಿದ್ದರಾಮಯ್ಯ ಟೇಕಾಫ್ ಮಾಡಲು ಮುಂದಾದರೆ ಡಿ.ಕೆ.ಶಿವಕುಮಾರ್ ಅದನ್ನು ತಡೆಯುತ್ತಾರೆ. ಜೆಡಿಎಸ್‌ನಲ್ಲಿ ಬಂಡಾಯವಿದ್ದು, ಪ್ರಚಾರ ಮಾಡಬೇಕಾದವರು ಪ್ರವಾಸದಲ್ಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 64 ಸಾವಿರ ಪದವೀಧರರ ನೋಂದಣಿ ಮಾಡಿಸಿದ್ದೇವೆ. 40 ಸಾವಿರ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೆವೆ. 30 ವರ್ಷದಿಂದ ಪಕ್ಷಕ್ಕೆ ನಿಷ್ಠರಾಗಿರುವ ಮೈ.ವಿ.ರವಿಶಂಕರ್ ಅವರಿಗೆ ಅವಕಾಶ ಕೊಡಿ. ನಿಮ್ಮ ಮತಕ್ಕೂ ನಿಷ್ಠರಾಗಿ ದುಡಿಯುತ್ತಾರೆ. ಹತ್ತಾರೂ ಮಂದಿಗೆ ಒಂದು ಸೈಟ್ ಕೊಡುವವರಲ್ಲ. ಸಂಘಟನೆ ಅಭಿವೃದ್ಧಿಗೆ ಆದ್ಯತೆ ಕೊಡುವವರಾಗಿದ್ದಾರೆ ಎಂದರು.
ದೇವರು, ಗುರುಗಳನ್ನು ಒಲಿಸಿಕೊಳ್ಳಲು ಭಕ್ತಿ ಬೇಕು: ಮತದಾರರ ಸಭೆ ಬಳಿಕ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಶ್ರೀಗಳಿಗೆ ಜನ್ಮದಿನೋತ್ಸವದ ಶುಭಕಾಮನೆ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಕಲ್ಯಾಣದ ಸಂಕಲ್ಪ ಇದ್ದರೆ ದೇವರ ಆಶೀರ್ವಾದ ಸದಾ ಇರುತ್ತದೆ. ಸಂಕಲ್ಪದ ಪರಾಕಾಷ್ಟೆಯೇ ದೈವ ಸ್ವರೂಪ, ಉತ್ಕೃಷ್ಟವಾದ ಪ್ರೀತಿಯೇ ಭಕ್ತಿ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದ ನಾಡಿನ ಪ್ರತಿಯೊಬ್ಬರಿಗೂ ಅದರಲ್ಲೂ ವಿಶೇಷವಾಗಿ ವಿಕಲಚೇತನರು,ಬಡಜನರಿಗೆ ಸಿಗಲಿ ಎಂದು ಸಿಎಂ ಕೋರಿದರು.
ದೇವರ ಮುಂದೆ ನಮಗೆ ಏನು ಬೇಕೆಂಬ ಮನೋಕಾಮನೆಗಳನ್ನು ಇಟ್ಟರೆ ಈಡೇರುವುದಿಲ್ಲ. ದೇವರು ಹಾಗೂ ಗುರುಗಳನ್ನು ಒಲಿಸಿಕೊಳ್ಳಲು ಶ್ರದ್ಧೆ, ಭಕ್ತಿಯೊಂದೇ ದಾರಿ. ನಾನು ಹುಟ್ಟಿದ್ದು ಹುಬ್ಬಳ್ಳಿಯ ದತ್ತಾತ್ರೇಯ ಓಣಿಯಲ್ಲಿ. ಶಾಲೆಗೆ ಹೋಗುವಾಗಲೆಲ್ಲಾ ಅಲ್ಲಿನ ಮಾರುಕಟ್ಟೆ ಬಳಿಯಿರುವ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡುತ್ತಿದ್ದೆ ಎಂದು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.
ನಂತರ ಮಾತನಾಡಿದ ಶ್ರೀಗಳು, ಲೋಕಕಲ್ಯಾಣಕ್ಕಾಗಿ ಒಂದು ಕೋಟಿ ದತ್ತ ಯಜ್ಞ, ಲಕ್ಷ ಶ್ರೀಸೂಕ್ತ ಹೋಮ ಮಾಡಲಾಗುತ್ತಿದೆ. ಬೊಮ್ಮಾಯಿಯವರು ಅಂದುಕೊಂಡ ಕೆಲಸಗಳೆಲ್ಲಾ ಶೀಘ್ರವಾಗಿ ಆಗಲಿ. ಮುಂದೆಯೂ ಹೀಗೆಯೇ ರಥ ನಡೆಸಲಿ ಎಂದು ಆಶೀರ್ವಚನ ನೀಡಿದರು.
ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಅವಧೂತ ದತ್ತಪೀಠದ ವತಿಯಿಂದ ನೀಡಲಾದ 28 ಲಕ್ಷ ಮೌಲ್ಯದ ಆಂಬುಲೆನ್ಸ್ ಅನ್ನು ಸಿಎಂ ಅವರು ಚೆಲುವಾಂಬ ಆಸ್ಪತ್ರೆಯ ಸೂಪರಿಡೆಂಟ್ ಡಾ.ಸವಿತಾ ಹಾಗೂ ಎಂ ಎಂ ಸಿ ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾ ನಂದ ತೀರ್ಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್,ನಾಗೇಂದ್ರ, ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್.. ಇಡಿ ಪ್ರಶ್ನೆಗಳಿಗೆ ಉತ್ತರಿಸಲು 3 ವಾರಗಳ ಸಮಯಾವಕಾಶ ಕೇಳಿದ ಸೋನಿಯಾ