ಮೈಸೂರು: ದಿನೇ ದಿನೇ ಬೆಲೆ ಏರಿಕೆಯಾಗುತ್ತಿರುವುದರಿಂದ ಬಿಜೆಪಿ ಇಮೇಜ್ ಕುಸಿಯುತ್ತಿದೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಲೆ ಏರಿಕೆಯಿಂದ ಜನತೆ ಸಂಕಷ್ಟದಲ್ಲಿ ಮುಳುಗಲಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ನೀನು ಯಾವ ಸೀಮೆ ನಾಯಕ?
ಸಿದ್ದರಾಮಯ್ಯ ಮತ್ತೆ ಬಾದಾಮಿಯಿಂದ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಇದು ಸಿದ್ದರಾಮಯ್ಯನ ಪಲಾಯನವಾದ. ನೀನು ಯಾವ ಸೀಮೆ ನಾಯಕ?. ಹೀನಾಯವಾಗಿ ಸೋತವನ ವಿರುದ್ಧವೇ ಶರಣಾಗಿದ್ದೀಯ? ಮೂಲ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಪಕ್ಷಕ್ಕೆ ಕರೆ ತರುತ್ತಿದ್ದೀಯಾ? ಅವನನ್ನೇ ನಮ್ಮ ನಾಯಕ ಎಂದು ಒಪ್ಪಿಕೊಂಡಿರುವ ನೀನು ಯಾವ ಸೀಮೆ ನಾಯಕ? ಎಂದು ಪ್ರಶ್ನಿಸಿದರು.
ತಾಕತ್ತಿದ್ರೆ ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲಿ
ಬಾದಾಮಿಯಲ್ಲಿ 1600 ಓಟಿನಿಂದ ಗೆಲ್ಲದೇ ಹೋಗಿದ್ರು, ಸಿದ್ದರಾಮಯ್ಯ ಏನಾಗುತ್ತಿದ್ರು? ಕಾಟೂರ್ ಫಾರಂ ಅಥವಾ ಸಿದ್ದರಾಮನ ಹುಂಡಿಗೆ ಹೋಗಿ ಹೊಲ ಉಳಬೇಕಾಗಿತ್ತು. ಇಲ್ಲವಾದ್ರೆ ವಿಜಯನಗರ ಮನೆಯಲ್ಲಿ ಕಾಲ ಕಳೆಯಬೇಕಾಗಿತ್ತು. ವಿರೋಧ ಪಕ್ಷದವರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ತಾಕತ್ತಿದ್ರೆ ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲಿ ನೋಡೋಣ ಎಂದು ಸವಾಲು ಹಾಕಿದರು.
ನಂಜನಗೂಡು, ಗುಂಡ್ಲುಪೇಟೆ ಬೈ ಎಲೆಕ್ಷನ್ನಲ್ಲಿ ಸಿದ್ದರಾಮಯ್ಯ ಸರ್ಕಾರ ಏನು ಮಾಡಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಸರ್ಕಾರದ ಆಡಳಿತ ಯಂತ್ರವನ್ನು ಅತೀ ಹೆಚ್ಚು ದುರ್ಬಳಕೆ ಮಾಡಿಕೊಂಡರು. ನನ್ನ ವಿರುದ್ಧ ಕಾಂಗ್ರೆಸ್ಗೆ ಅಭ್ಯರ್ಥಿಯೇ ಇರಲಿಲ್ಲ. ಆಗ ಇದೇ ಜೆಡಿಎಸ್ನವರು ನನ್ನ ವಿರುದ್ಧ ಅಭ್ಯರ್ಥಿಯನ್ನೇ ಹಾಕಲಿಲ್ಲ.
ಕಾಂಗ್ರೆಸ್ ಜತೆ ಜೆಡಿಎಸ್ನವರು ಕೈ ಜೋಡಿಸಿದರು. ವಿವಿಧ ನಿಗಮಗಳಿಂದ ಕ್ಷೇತ್ರದ ಮತದಾರರಿಗೆ ಕೋಟಿಗಟ್ಟಲೆ ಸಾಲದ ಆಮಿಷ ಒಡ್ಡಿದರು. ನೂರಾರು ಕೋಟಿ ರೂ. ತುಂಡು ಗುತ್ತಿಗೆ ನೀಡಿ ಕಾಮಗಾರಿ ಮಾಡಿದರು. ಸುಣ್ಣವಾಗಿರುವ ಕಾಂಗ್ರೆಸ್ಸಿಗರು ಆಡಳಿತದಲ್ಲಿದ್ದಾಗ ಏನೆಲ್ಲಾ ಮಾತನಾಡಿದರು? ಈಗ ಬಿಜೆಪಿ ವಿರುದ್ದ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಪ್ರಧಾನಿ ಬಗ್ಗೆ ಹಗುರ ಮಾತು ಬೇಡ:
ಪ್ರಧಾನಿ ಮೋದಿ ಅವರ ಬಗ್ಗೆ ಸಿದ್ದರಾಮಯ್ಯ, ಹಗುರವಾಗಿ ಮಾತನಾಡುವುದು ಬೇಡ. ತಾಲಿಬಾನ್ ಆಡಳಿತವನ್ನು ಹೋಲಿಸುವುದು ಇದೆಲ್ಲ ಎಂತಹ ಮಾತು?. ದೇಶದ ಪ್ರಧಾನಿ ಹುದ್ದೆ ಅಂದ್ರೆ ಏನು ಅನ್ನೋದೆ ಸಿದ್ದರಾಮಯ್ಯಗೆ ಗೊತ್ತಿಲ್ವ?. 1984ರ ನಂತರ ಕೇಂದ್ರದಲ್ಲಿ ಸುಭದ್ರ ಸರ್ಕಾರವೇ ಇರಲಿಲ್ಲ. ಮೋದಿ ಅವರಿಂದಾಗಿ ಕೇಂದ್ರದಲ್ಲಿ ಸುಭದ್ರ ಸರ್ಕಾರ ಬಂದಿದೆ ಎಂದರು.
ಮೋದಿಯವರು ರಾಷ್ಟ್ಟ ಮಟ್ಟದ ರಾಜಕಾರಣದಲ್ಲಿ ಇರಲೇ ಇಲ್ಲ. ಅವರನ್ನು ಬಿಜೆಪಿ ಪ್ರಮೋಟ್ ಮಾಡಿ ಪ್ರಧಾನಿ ಮಾಡಿದೆ. ಅದಕ್ಕೆ ತಕ್ಕಂತೆ ಮೋದಿಯವರು ವಿಶ್ವ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಇಂತಹವರ ಬಗ್ಗೆ ಲಘು ಮಾತು ನಿಜಕ್ಕೂ ನನಗೆ ಬೇಸರ ಮೂಡಿಸಿದೆ ಎಂದು ತಿಳಿಸಿದರು.
ಜೆಡಿಎಸ್ ಪಾರ್ಟಿಯಲ್ಲ, ಅದು ಕಂಪನಿ:
ಪ್ರಜ್ವಲ್, ನಿಖಿಲ್, ಭವಾನಿ, ಅನಿತಾ ನೀವೇ ಇದ್ರೆ ಅದನ್ನು ಪಕ್ಷ ಅನ್ನಲ್ಲ, ಕಂಪನಿ ಅಂತಾರೆ. ಕುಮಾರಸ್ವಾಮಿ ತಮ್ಮ ಇತಿಮಿತಿ ಅರಿತು ಮಾತನಾಡಲಿ. ಯಾವಾಗಲೂ ಎರಡನೇ ಸ್ಥಾನ ಬಂದವರು ಸಿಎಂ ಆಗಿದ್ದಾರಾ?. ಮೂರನೇ ಸ್ಥಾನ ತಗೊಂಡು ಎರಡು ಬಾರಿ ಸಿಎಂ ಆದ್ರು. ದೇವೇಗೌಡರು ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲು ಕಾರ್ಯ ತಂತ್ರ ರೂಪಿಸುತ್ತಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದರು.