ಮೈಸೂರು : ಮೈಸೂರು ಹಾಗೂ ಬೆಂಗಳೂರು ನಡುವೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 117 ಕಿ.ಮೀ ಉದ್ದದ ದಶಪಥ ರಾಷ್ಟ್ರೀಯ ಹೆದ್ದಾರಿ ಎಕ್ಸ್‌ಪ್ರೆಸ್ ವೇ (ಎನ್ಹೆಚ್-275) ಅಕ್ಟೋಬರ್ ತಿಂಗಳಿನೊಳಗೆ ಪೂರ್ಣಗೊಳ್ಳಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಹೆಚ್ಎಐ) ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಹಾಗೂ ಬೆಂಗಳೂರು ನಡುವೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದಶಪಥ ಎಕ್ಸ್ ಪ್ರೆಸ್ ಹೈವೇ (ಎನ್ಹೆಚ್-275) ಕಾಮಗಾರಿ ಭರದಿಂದ ನಡೆಯುತ್ತಿದೆ. 2022ರ ಅಕ್ಟೋಬರ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಮೈಸೂರು ಹಾಗೂ ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯು 117 ಕಿ.ಮೀ ಉದ್ದದ ಎಕ್ಸ್‌ಪ್ರೆಸ್ ಹೈವೇಯಾಗಿದೆ. ಅಂದಾಜು 8,350 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಮೈಸೂರು ಹಾಗೂ ಬೆಂಗಳೂರು ನಡುವೆ 75 ನಿಮಿಷದಲ್ಲಿ ಪ್ರಯಾಣ ಮಾಡಬಹುದು.
ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಡೆ ವಾಹನಗಳಿಗೆ ಟೋಲ್ ಸಂಗ್ರಹಿಸಲು ವಿಶಾಲವಾದ ಟೋಲ್ ಕೌಂಟರ್ಗಳನ್ನು ನಿರ್ಮಿಸಲಾಗಿದೆ. ಏಕ ಕಾಲದಲ್ಲಿ 8 ವಾಹನಗಳ ಶುಲ್ಕ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೂ ಅವಕಾಶ ಕಲ್ಪಿಸಲಾಗಿದೆ. ಮೈಸೂರು ಕಡೆಯಿಂದ ಹೋಗುವಾಗ ಹಾಗೂ ಬೆಂಗಳೂರು ಕಡೆಯಿಂದ ಬರುವ ಎರಡು ಕಡೆ ವಾಹನಗಳಿಗೂ ಟೋಲ್ ವಸೂಲಿ ಮಾಡಲಾಗುತ್ತದೆ.
ಮೈಸೂರು ಭಾಗದಲ್ಲಿ ಶ್ರೀರಂಗಪಟ್ಟಣದ ನಂತರ ಕೆ.ಶೆಟ್ಟಿಹಳ್ಳಿ ಸಮೀಪ ಗಣಂಗೂರು ಮತ್ತು ಕೋಡಿ ಶೆಟ್ಟಿಪುರ ನಡುವೆ ಒಂದು, ಬೆಂಗಳೂರು ಕಡೆಯಿಂದ ಬಿಡದಿ ಸಮೀಪ ಕೆಣಮಿಣಕಿ ಗ್ರಾಮದ ಬಳಿ ಮತ್ತೊಂದು ಟೋಲ್ ಕೌಂಟರ್ ನಿರ್ಮಾಣ ಮಾಡಲಾಗಿದೆ. ಮೈಸೂರು ಹಾಗೂ ಬೆಂಗಳೂರು ನಡುವಿನ ನ್ಯಾಷನಲ್ ಹೈವೇ ಕಾಮಗಾರಿ ಮುಗಿದ ನಂತರ ವಾಹನಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತದೆ.
ಹೈವೇ ನಿರ್ಮಾಣದ ಖರ್ಚು ಹಾಗೂ ನಿರ್ವಹಣಾ ವೆಚ್ಚಗಳನ್ನು ಆಧರಿಸಿ ವಾಹನಗಳ ಟೋಲ್ ಬೆಲೆಯನ್ನು ನಿರ್ಧರಿಸಲಾಗುವುದು. ಜತೆಗೆ ಟೋಲ್ ಸಂಗ್ರಹಿಸಲು ಟೆಂಡರ್ ಮೂಲಕ ಏಜೆನ್ಸಿಗಳಿಗೆ ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಗೆ 'ಡಸ್ಟ್ ಸಿಟಿ' ಕುಖ್ಯಾತಿ : ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿದ ರಾಜ್ಯದ ಮೊದಲ ನಗರ