ಮೈಸೂರು: ನಗರದಲ್ಲಿ ಮಕ್ಕಳಿಂದ ಭಿಕ್ಷೆ ಬೇಡಿಸುವ ದೊಡ್ಡ ಮಾಫಿಯಾವೇ ಇದೆ. ಕೆಲವರು ಹೊಟ್ಟೆಪಾಡಿಗೆ ಭಿಕ್ಷೆ ಬೇಡಿದರೆ ಇನ್ನು ಕೆಲವರು ದಂಧೆ ಮಾಡಿಕೊಂಡಿದ್ದಾರೆ ಎಂದು ಎನ್ಜಿಒ ಸಿಬ್ಬಂದಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕೆ.ಆರ್.ಸರ್ಕಲ್, ಡಬಲ್ ರೋಡ್, ಸಯ್ಯಾಜಿ ರಾವ್ ರಸ್ತೆ, ಅರಮನೆ ಸುತ್ತ, ದೇವರಾಜ ಅರಸು ರಸ್ತೆ, ನಗರದ ಸಿಟಿ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣ, ಪ್ರವಾಸಿ ತಾಣಗಳು ಸೇರಿದಂತೆ ಹೆಚ್ಚು ಜನರು ಓಡಾಡುವ ಸ್ಥಳಗಳಲ್ಲಿ ಭಿಕ್ಷೆ ಬೇಡುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
ಸಮಸ್ಯೆ ಇರುವವರು ತಮ್ಮ ಮಕ್ಕಳನ್ನು ಭಿಕ್ಷೆಗೆ ಕಳುಹಿಸುತ್ತಾರೆ. ಮಕ್ಕಳನ್ನು ಅಪಹರಿಸಿ ಅವರಿಗೆ ಶಿಕ್ಷೆ ನೀಡಿ ಭಿಕ್ಷಾಟನೆಗೆ ಹಾಕುತ್ತಾರೆ (ದಂಧೆಯ ಭಾಗ). ಹಾಗೆಯೇ ಭಿಕ್ಷೆ ನೀಡುವವರಿಗೆ ಅನುಕಂಪ ಬರಲಿ ಎಂದು ಅವರಿಗೆ ಗಾಯಗೊಳಿಸುತ್ತಾರೆ. ಮಹಿಳೆಯರು ಹಸುಗೂಸನ್ನು ಎತ್ತಿಕೊಂಡು ಭಿಕ್ಷೆ ಬೇಡುವವರನ್ನು ಕಾಣಬಹುದು.
ಕಂದಮ್ಮನನ್ನು ಎತ್ತಿಕೊಂಡು ಭಿಕ್ಷೆ ಬೇಡುವ ಮಹಿಳೆಯರು ಆ ಮಗುವಿಗೆ ಡ್ರಗ್ಸ್ ನೀಡುತ್ತಾರೆ. ಭಿಕ್ಷೆಯಿಂದ ಬಂದಂತಹ ಹಣದಲ್ಲಿ ಆ ಮಹಿಳೆಯೂ ಡ್ರಗ್ಸ್ ತೆಗೆದುಕೊಳ್ಳುತ್ತಾಳೆ. ಇದನ್ನು ನಡೆಸುವ ದೊಡ್ಡ ಮಾಫಿಯಾವೇ ಇದರ ಹಿಂದೆ ಇದೆ. ಇದನ್ನು ಮಟ್ಟ ಹಾಕಬೇಕು ಎನ್ನುತ್ತಾರೆ ಎನ್ಜಿಒ ಸಿಬ್ಬಂದಿ ಎಂ.ಪಿ.ವರ್ಷ.