ಮೈಸೂರು : ರಂಗಾಯಣದಲ್ಲಿ ಇದೇ ಮಾರ್ಚ್ 11 ರಿಂದ 20ರವರೆಗೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ನಾಟಕದ ಜೊತೆಗೆ ಜನಪದ ಕಲೆ, ವಿಚಾರ ಸಂಕಿರಣ, ಫಿಲ್ಮ್ ಫೆಸ್ಟಿವಲ್, ಕರಕುಶಲ ಕಲೆ ಪ್ರದರ್ಶನ ನಡೆಯುವ ಕಾರಣ ಇದನ್ನು ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿ ಬಹುರೂಪಿ ರಂಗೋತ್ಸವನ್ನು ತಾಯಿ ಎಂಬ ವಸ್ತು ವಿಷಯವನ್ನು ಇಟ್ಟುಕೊಂಡು ನಡೆಸಲಾಗುತ್ತಿದೆ. ಜಮೀನು, ಜಲ, ಜಂಗಲ್, ಜಾನುವಾರು, ಜನ ಈ ಪಂಚಸೂತ್ರದಲ್ಲಿ ತಾಯಿ ಮತ್ತು ತಾಯ್ತನವನ್ನು ನೋಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಎಂದು ತಿಳಿಸಿದರು.
ರಂಗೋತ್ಸದಲ್ಲಿ 35 ನಾಟಕಗಳು ಪ್ರದರ್ಶನಗೊಳ್ಳಲಿವೆ. ಬೇರೆ ಬೇರೆ ಭಾಷೆಯ 12 ನಾಟಕಗಳು ಹಾಗೂ ಕನ್ನಡದ 20 ನಾಟಕಗಳು ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಅಂತಾರಾಷ್ಟ್ರೀಯ ಚಲನಚಿತ್ರಗಳು ಸೇರಿ, ಪುನೀತ್ ರಾಜ್‍ಕುಮಾರ್ ನಟನೆಯ ರಾಜಕುಮಾರ ಹಾಗೂ ರಾಜ್‍ಕುಮಾರ್ ಅವರ ಬಬ್ರುವಾಹನ ಚಲನಚಿತ್ರಗಳು ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ಸರ್ಕಾರ ಬಹುರೂಪಿ ರಂಗೋತ್ಸವನ್ನು ಹಂಪಿ ಉತ್ಸವ ಹಾಗೂ ಆನೆಗುಂದಿ ಉತ್ಸವದ ರೀತಿ ನಾಡಿನ ಉತ್ಸವಗಳ ಪಟ್ಟಿಗೆ ಸೇರಿಸಿ ಸರ್ಕಾರ ಅನುದಾನ ನೀಡಿದೆ. ಹಾಗಾಗಿ, ಈ ಬಾರಿ ನಾಟಕೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ ಎಂದರು.
ವೃಕ್ಷಮಾತೆ ಪದ್ಮಶ್ರೀ ತುಳಸೀಗೌಡ ಅವರು ರಂಗೋತ್ಸವವನ್ನು ಉದ್ಘಾಟಿಸಲಿದ್ದಾರೆ. ಪದ್ಮಶ್ರೀ ಮಂಜಮ್ಮ ಜೋಗತಿ, ನಾ.ಡಿ.ಡಿಸೋಜ, ಮಾಳವಿಕಾ ಅವಿನಾಶ್, ಚಕ್ರವರ್ತಿ ಸೂಲಿಬೆಲೆ, ದೊಡ್ಡರಂಗೇಗೌಡ ಸೇರಿದಂತೆ 25ಕ್ಕೂ ಹೆಚ್ಚು ಅತಿಥಿಗಳು ರಂಗೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.
ಓದಿ: ಹಿಜಾಬ್-ಕೇಸರಿ ಸಂಘರ್ಷವನ್ನು ದುರುಪಯೋಗ ಮಾಡಿಕೊಳ್ಳೋದು ಬೇಡ : ಸ್ಪೀಕರ್ ಕಾಗೇರಿ ಮನವಿ