ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ಭೂ ವಿವಾದದ ಬಿ.ಖರಾಬ್ ರದ್ದುಪಡಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕುರುಬರಹಳ್ಳಿ ಸರ್ವೇ ನಂ. 4, ಆಲನಹಳ್ಳಿ ಸರ್ವೇ ನಂ. 41 ಹಾಗೂ ಚೌಡಹಳ್ಳಿ ಸರ್ವೇ ನಂ. 39ಕ್ಕೆ ಒಳಪಡುವ 2 ಸಾವಿರ ಎಕರೆ ಭೂ ಪ್ರದೇಶದ ವ್ಯಾಪ್ತಿಯ ಈ ಎಲ್ಲಾ ಭೂ ಖಾತೆಗಳಲ್ಲಿ ನಮೂದಾಗಿದ್ದ ಬಿ ಖರಾಬ್ ರದ್ದಾಗಿದೆ.
ಈ ಹಿನ್ನೆಲೆಯಲ್ಲಿ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಹಾಗೂ ತಹಶೀಲ್ದಾರ್ಗೆ ನ್ಯಾಯಾಲಯ ಕಟು ಎಚ್ಚರಿಕೆ ನೀಡಿತ್ತು. ಹೈಕೋರ್ಟ್ ಕಟ್ಟಾಜ್ಞೆ ಹಿನ್ನೆಲೆಯಲ್ಲಿ ಇದೀಗ ಬಿ ಖರಾಬ್ ರದ್ದು ಮಾಡಲಾಗಿದೆ. ಬಿ ಖರಾಬ್ ರದ್ದು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಅಡ್ವೋಕೇಟ್ ಜನರಲ್ ಅಭಿಪ್ರಾಯ ತಿಳಿಸಿದ ಹಿನ್ನೆಲೆಯಲ್ಲಿ, ಇವರ ಅಭಿಪ್ರಾಯ ಆಧರಿಸಿ, ಬಿ ಖರಾಬ್ ಅನ್ನು ಸರ್ಕಾರ ರದ್ದು ಮಾಡಿದ್ದು, ಕೋರ್ಟ್ಗೆ ವರದಿ ಸಲ್ಲಿಸಲಿದೆ.
ಚಾಮುಂಡಿ ಬೆಟ್ಟದ ಭೂವಿವಾದ ಹಿನ್ನೆಲೆಯಲ್ಲಿ ಸುಮಾರು 2-3 ದಶಕಗಳಿಂದ ಕಾನೂನು ಸಮರ ನಡೆಯುತ್ತಿದೆ. ಬೆಟ್ಟದ ತಪ್ಪಲು ಭೂಮಿ ರಾಜ ಮನೆತನದವರ ಖಾಸಗಿ ಆಸ್ತಿ. ಆದ್ದರಿಂದ ರಾಜರಿಂದ ಭೂಮಿ ಖರೀದಿ ಮಾಡಿದ್ದ ಮಾಲೀಕರ ಹೆಸರಿಗೆ ಖಾತೆ ಮಾಡುವಂತೆ ಹೈಕೋರ್ಟ್ ತೀರ್ಪು ನೀಡಿತ್ತು.ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ವಿಚಾರಣೆಯ ಅಂಗೀಕಾರಕ್ಕೆ ಮುನ್ನವೇ ರಾಜ್ಯ ಸರ್ಕಾರದ ಮೇಲ್ಮನವಿಯನ್ನ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.
ಹೈಕೋರ್ಟ್ ಆದೇಶ ಪಾಲನೆ ಮಾಡದ್ದಕ್ಕೆ ಭೂ ಮಾಲೀಕರು ನ್ಯಾಯಾಂಗ ನಿಂದನೆ ಅರ್ಜಿ ಹಾಕಿದ್ದರು. ಈ ಅರ್ಜಿ ಪರಿಗಣಿಸಿ ಹೈಕೋಟ್೯ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಬಿ ಖರಾಬ್ ರದ್ದು ಮಾಡಲು ಹೈಕೋರ್ಟ್ ಗಡುವು ನೀಡಿತ್ತು. ಹೈಕೋರ್ಟ್‌ನಲ್ಲಿ ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇಂದು ನಡೆಯಲಿದೆ.