ಮೈಸೂರು : ಕಳೆದ 22 ವರ್ಷಗಳಿಂದ 16 ಸಾವಿರ ಶವಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಶವಸಂಸ್ಕಾರ ಮಾಡಿದ ಸ್ವಯಂ ಸೇವಕ ಆಯೂಬ್ ಪಾಲಿಕೆಯ ಜೊತೆ ಸೇರಿ ಈಗಲೂ ಕೊರೊನಾ ಮೃತರ ಶವಸಂಸ್ಕಾರ ಮಾಡುತ್ತಿದ್ದಾರೆ. ಇವರು ಈಟಿವಿ ಭಾರತ್ ಜತೆ ಕೊರೊನಾ 2ನೇ ಅಲೆಯ ಭೀಕರತೆ ವಿವರಿಸಿದ್ದಾರೆ.
ಇಂದು ಮುಕ್ತಿಧಾಮದಲ್ಲಿ ಶವಸಂಸ್ಕಾರದ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಕೊರೊನಾ ಮೊದಲನೇ ಅಲೆ ಅಷ್ಟು ತೀವ್ರತೆ ಪಡೆಯದಿದ್ದರೂ ಜನ ಹೆದರಿದ್ದರು. 2ನೇ ಅಲೆ ಅಪಾಯಕಾರಿಯಾಗಿದ್ದರೂ ಜನ ಹೆದರುತ್ತಲೇ ಇಲ್ಲ.
ಮೊದಲ ಅಲೆಯಲ್ಲಿ ಸೋಂಕಿತರು ಆಸ್ಪತ್ರೆಗೆ ಹೋಗಿ 15 ರಿಂದ 20 ದಿನ ಇದ್ದು ಗುಣಮುಖರಾಗಿ ಬರುತ್ತಿದ್ದರು. 2ನೇ ಅಲೆಯಲ್ಲಿ ಆಸ್ಪತ್ರೆಗೆ ಹೋದ 20 ರಿಂದ 30 ನಿಮಿಷಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ 30 ರಿಂದ 50 ವರ್ಷದ ವಯಸ್ಸಿನವರೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ ಎಂದರು.
ಈ ಬಾರಿ ಕೊರೊನಾದಿಂದ ಮೃತಪಟ್ಟ ತಂದೆ, ತಾಯಂದಿರನ್ನು ನೋಡಲು ಮಕ್ಕಳೇ ಬರುತ್ತಿಲ್ಲ. ನೀವೇ ಶವಸಂಸ್ಕಾರ ಮಾಡಿ ಎಂದು ಹೇಳುತ್ತಿದ್ದಾರೆ. ಇಂತಹ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಏನು ಪ್ರಯೋಜನ ಎಂದು 3ನೇ ತರಗತಿ ಓದಿರುವ ಆಯೂಬ್ ಬೇಸರ ವ್ಯಕ್ತಪಡಿಸಿದರು.
ಈ ಆಯೂಬ್ ಯಾರು?
3ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಆಯೂಬ್ ಅಹಮ್ಮದ್ ಜೀ ಒಂದು ಮಾರುತಿ ವ್ಯಾನ್ ಇಟ್ಟುಕೊಂಡಿದ್ದು, ಕಳೆದ 22 ವರ್ಷಗಳಿಂದ ಎಲ್ಲಾ ಧರ್ಮದ 16 ಸಾವಿರ ಶವಗಳನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ.
ಈತ ಒಂದು ಫೋನ್ ಮಾಡಿದರೆ ಸಾಕು ಸ್ಥಳಕ್ಕೆ ತೆರಳಿ ಶವಗಳನ್ನು ತೆಗೆದುಕೊಂಡು ಅಂತ್ಯಸಂಸ್ಕಾರ ಮಾಡುತ್ತಾರೆ. 2ನೇ ಅಲೆಯಲ್ಲಿ ಕಳೆದ ಒಂದು ತಿಂಗಳಿಂದ 700 ಶವಸಂಸ್ಕಾರಗಳನ್ನು ಪಾಲಿಕೆಯ ಜೊತೆ ಸೇರಿ ಆಯೂಬ್ ನೆರವೇರಿಸಿದ್ದಾರೆ.