ಮೈಸೂರು: 8 ವರ್ಷದ ಬಾಲಕನೊಬ್ಬ ಆಟವಾಡುವ ವೇಳೆ ಬಟನ್ ಶೆಲ್ಗಳನ್ನು ನುಂಗಿದ್ದು, ನಗರದ ಅಪೋಲೋ ಆಸ್ಪತ್ರೆಯ ವೈದ್ಯರು ಯಶಸ್ವಿ ಚಿಕಿತ್ಸೆ ಮೂಲಕ ಬಟನ್ ಹೊರ ತೆಗೆದಿದ್ದಾರೆ.
ಬಾಲಕನೊಬ್ಬ ಆಟವಾಡುವ ಸಂದರ್ಭದಲ್ಲಿ ಬಟನ್ ಶೆಲ್ಗಳನ್ನು ನುಂಗಿದ್ದಾನೆ. ತಕ್ಷಣವೇ ಈ ಕುರಿತು ತನ್ನ 15 ವರ್ಷದ ಅಕ್ಕನಿಗೆ ವಿಷಯ ತಿಳಿಸಿದ್ದು, ಮೋಷನ್ ಮೂಲಕ ಹೋಗುತ್ತದೆ ಭಯಪಡಬೇಡ ಎಂದು ಬುದ್ದಿ ಹೇಳಿದ್ದಾಳೆ. 4 ಗಂಟೆಗಳ ಬಳಿಕ ಭಯಗೊಂಡು ಮಕ್ಕಳಿಬ್ಬರು ಪೋಷಕರಿಗೆ ವಿಷಯ ಮುಟ್ಟಿಸಿದರು. ಕೂಡಲೇ ಪೋಷಕರು ಬಾಲಕನನ್ನು ಮಕ್ಕಳ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು, ವೈದ್ಯರು ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಬಳಿ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
![ಬಾಲಕನ ಹೊಟ್ಟೆಯಲ್ಲಿದ್ದ ಬಟನ್ ಶೆಲ್](https://etvbharatimages.akamaized.net/etvbharat/prod-images/kn-mys-01-doctor-news-7208092_29072021130205_2907f_1627543925_394.jpg)
ಸ್ಥಳೀಯ ವೈದ್ಯರ ಸೂಚನೆ ಮೇರೆಗೆ ಬಾಲಕನನ್ನು ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಎಂಡೋಸ್ಕೋಪಿಕ್ ಮೂಲಕ ಬಾಲಕನ ಹೊಟ್ಟೆಯೊಳಗೆ 3 ಬಟನ್ ಶೆಲ್ಗಳಿರುವುದು ಕಂಡುಬಂದಿದೆ. 2 ಶೆಲ್ಗಳು ಹೊಟ್ಟೆಯೊಳಗೆ ಇದ್ದರೆ, 1 ಶೆಲ್ ಕರುಳಿನಲ್ಲಿ ಸಿಲುಕಿರುವುದು ಪತ್ತೆಯಾಗಿದೆ.
ನಂತರ ಎಂಡೋಸ್ಕೋಪಿಕ್ ಸ್ಪೆಷಲಿಸ್ಟ್ ಡಾ.ಆತಿರಾ ರವೀಂದ್ರನಾಥ್ ಮತ್ತು ಅವರ ತಂಡ ಎಂಡೋಸ್ಕೋಪಿಕ್ ನಡೆಸಿದ್ದಾರೆ. ಬಾಲಕನ ಹೊಟ್ಟೆಯಲ್ಲಿ ಸಾಕಷ್ಟು ಆಹಾರ ಇರುವುದು ಕಂಡುಬಂದ ಹಿನ್ನೆಲೆ ಎಂಡೋಸ್ಕೋಪಿಕ್ ಬಳಸಿ ಆಹಾರ ಹೊರತೆಗೆದು, ನಂತರ ರೋತ್ ನೆಟ್ ಎಂಡೋಸ್ಕೋಪ್ ಬಳಸಿ 2 ಶೆಲ್ ಗಳನ್ನು ಹೊರತೆಗೆದಿದ್ದಾರೆ. ಬಳಿಕ ಕೊಲೊನೋಸ್ಕೋಪಿ ಮೂಲಕ ಕರುಳಿನಲ್ಲಿದ್ದ 3ನೇ ಶೆಲ್ ಅನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಶೆಲ್ ಬಗ್ಗೆ ವೈದ್ಯರು ಹೇಳಿದ್ದೇನು?
ಆಧುನಿಕ ಲಿಥಿಯಂ ಬ್ಯಾಟರಿಗಳು ಹೆಚ್ಚಿನ ವೋಲ್ಟೇಜ್ ಹೊಂದಿರುವ ಕಾರಣ ಅದು ಹೊಟ್ಟೆಯಲ್ಲಿರುವುದು ಅತ್ಯಂತ ಅಪಾಯಕಾರಿ. ಈ ಶೆಲ್ಗಳು ಹೈಡ್ರಾಕ್ಸೈಡ್ ರಾಡಿಕಲ್ ಗಳನ್ನು ಬಿಡುಗಡೆ ಮಾಡುವುದರಿಂದ ಜೀರ್ಣಾಂಗದ ಒಳಗಿನ ಒಳಪದರವನ್ನು ಗಾಯಗೊಳಿಸುತ್ತದೆ. ಹಾಗೂ ಆಹಾರದ ಕರುಳು, ಹೊಟ್ಟೆ, ಸಣ್ಣ ಕರುಳನ್ನು ಪ್ರವೇಶಿಸಿ ರಂಧ್ರವನ್ನು ಮಾಡುತ್ತದೆ. ಅದ್ದರಿಂದ ಬೇಗ ಚಿಕಿತ್ಸೆ ಮಾಡಿದ್ದರಿಂದ ಬಾಲಕನಿಗೆ ಯಾವುದೇ ಸಮಸ್ಯೆಗಳು ಕಂಡುಬರಲಿಲ್ಲ ಎಂದು ವೈದ್ಯೆ ಡಾ. ಆತಿರಾ ರವೀಂದ್ರನಾಥ್ ತಿಳಿಸಿದ್ದಾರೆ.