ಮೈಸೂರು: ಕೆ.ಆರ್.ನಗರ ತಾಲೂಕಿನ ಭೇರ್ಯ ಬಳಿಯ ಮಠದ ಕಾವಲ್ ಅರಣ್ಯ ಪ್ರದೇಶದಲ್ಲಿರುವ ಪುರಾತನ ದೇವಾಲಯದಲ್ಲಿನ ಲಿಂಗರೂಪದ ಸಿದ್ದಲಿಂಗೇಶ್ವರಸ್ವಾಮಿ ಹಾಗೂ ಮಹದೇಶ್ವರಸ್ವಾಮಿ ಅವರನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಬಾಗಿಲು ಮುರಿದು ಸಿದ್ಧಲಿಂಗೇಶ್ವರ ಸ್ವಾಮಿ ವಿಗ್ರಹಗಳನ್ನು ಧ್ವಂಸ ಮಾಡಿ ವಿಕೃತಿ ಮೆರೆದಿದ್ದಾರೆ. ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲಿಂಗದ ಮೂರ್ತಿಯನ್ನು ಧ್ವಂಸಗೊಳಿಸಿದ್ದು, ಕಲ್ಲಿನ ಲಿಂಗ ದೇವಸ್ಥಾನದ ಒಳಗೆ ಚೆಲ್ಲಾಪಿಲ್ಲಿಯಾಗಿದೆ. ಪ್ರಬಾಳೆಗಳನ್ನೆಲ್ಲ ಹಾಗೇ ಬಿಟ್ಟಿದ್ದು, ಕಲ್ಲಿನ ಲಿಂಗವನ್ನು ಮಾತ್ರ ಧ್ವಂಸ ಮಾಡಲಾಗಿದೆ.
ಕಾರ್ತಿಕ ಅಮಾವಾಸ್ಯೆಯ ನಿಮಿತ್ತ ಶನಿವಾರ ಸಾಲುಪಂಕ್ತಿ ಅನ್ನದಾಸೋಹ, ಅಡ್ಡಪಲ್ಲಕ್ಕಿ ಉತ್ಸವ ಮತ್ತು ತೆಪ್ಪೋತ್ಸವವನ್ನು ಆಚರಿಸಲಾಗಿತ್ತು.
ಯಡಿಯೂರಿನ ಸಿದ್ಧಲಿಂಗೇಶ್ವರ ಸ್ವಾಮಿ ಇಲ್ಲಿಗೆ ಬಂದು ತಪಸ್ಸು ಮಾಡಿ, ನಂತರ ಯಡಿಯೂರಿಗೆ ಹೋಗಿ ಅಲ್ಲಿ ನೆಲೆಸಿದರು ಎಂಬ ಪ್ರತೀತಿ ಇದೆ. ಕಲ್ಲಿನ ಲಿಂಗವನ್ನು ಧ್ವಂಸ ಮಾಡಿದ್ದಕ್ಕೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನೆತ್ತಿ ಮೇಲಿನ ಸೂರಿಗಿಲ್ಲ ಕುತ್ತು.. ಇನ್ನೂ 3 ವರ್ಷ ಪಿಎಂಎವೈ ವಿಸ್ತರಣೆಗೆ ಕೇಂದ್ರ ಸಂಪುಟ ಅಸ್ತು
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಸಾಲಿಗ್ರಾಮ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಕಾಂತ್ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.