ಮೈಸೂರು: ಶಾಲೆಯ ಆರಂಭದಲ್ಲಿಯೇ ಮಕ್ಕಳಿಗೆ ಜೋಶ್ ಶುರುವಾಗಿದ್ದು, ಮಕ್ಕಳು ಶಾಲೆಗೆ ಎತ್ತಿನ ಗಾಡಿಯಲ್ಲಿ ಆಗಮಿಸಿ ಖುಷಿ ಪಟ್ಟಿದ್ದಾರೆ. ನಂಜನಗೂಡು ಪಟ್ಟಣದ ಅಶೋಕಪುರಂನಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಎತ್ತಿನಗಾಡಿ ಮೂಲಕ ಕರೆತರಲಾಯಿತು. ಡಿಡಿಪಿಐ ರಾಮಚಂದ್ರ ರಾಜೇ ಅರಸ್, ಬಿಇಒ, ಅಧಿಕಾರಿಗಳು, ಶಾಲೆಯ ಶಿಕ್ಷಕರು ಮಕ್ಕಳಿಗೆ ಸ್ವಾಗತ ಕೋರಿದರು.
ಪ್ರತಿ ಮಕ್ಕಳಿಗೂ ಶಾಲೆಯಲ್ಲಿ ಸ್ವೀಟ್ ನೀಡಿ ಬರ ಮಾಡಿಕೊಳ್ಳಲಾಯಿತು. ಕೊರೊನಾ ಮೊದಲ ಹಾಗೂ ಎರಡನೇ ಅಲೆಯಿಂದ ತತ್ತರಿಸಿದ್ದ ವಿದ್ಯಾರ್ಥಿಗಳಿಗೆ, ಇಂದಿನಿಂದ ಪೂರ್ಣ ಪ್ರಮಾಣದ ತರಗತಿಗಳು ಆರಂಭವಾಗುತ್ತಿರುವುದರಿಂದ ಸಂತಸವಾಗಿದೆ. ಮೊದಲ ದಿನವೇ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಶಿಕ್ಷಣ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಹನೂರಲ್ಲಿ ಮಕ್ಕಳಿಂದ ಓಂಕಾರ: ಚಾಮರಾಜನಗರದ ಹನೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲನೇ ತರಗತಿ ವಿದ್ಯಾರ್ಥಿಗಳು ಓಂಕಾರ ಬರೆದು ಶಿಕ್ಷಕರಿಂದ ಸಿಹಿ ಪಡೆದು ತಮ್ಮ ವಿಧ್ಯಾಭ್ಯಾಸ ಆರಂಭಿಸಿದ್ದಾರೆ. ತಟ್ಟೆಯೊಂದರಲ್ಲಿ ಅಕ್ಕಿ ಇಟ್ಟು ವಿದ್ಯಾರ್ಥಿ ಪಾಲಕರಿಂದ ಮಕ್ಕಳಿಗೆ ಓಂಕಾರ ಬರೆಸಿ ಮಕ್ಕಳನ್ನು ಅಲ್ಲಿನ ಶಿಕ್ಷಕರು ಬರಮಾಡಿಕೊಂಡಿದ್ದಾರೆ.
ಹೊಂಗಳ್ಳಿ ಶಾಲೆಗೆ ಎತ್ತಿನಗಾಡಿಯಲ್ಲಿ ಬಂದ ಚಿಣ್ಣರು: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿ ಶಾಲೆಗೆ 20 ಜೊತೆ ಎತ್ತಿನಗಾಡಿಯಲ್ಲಿ ನೂರಾರು ಮಕ್ಕಳನ್ನು ಕರೆ ತರಲಾಗಿದೆ. ಮೊದಲನೇ ತರಗತಿ ವಿದ್ಯಾರ್ಥಿಗಳಿಗರ ಸಿಹಿ ಮತ್ತು ಹೂ ಕೊಟ್ಟು ಶಾಲಾ ಸಿಬ್ಬಂದಿ ಸ್ವಾಗತ ಕೋರಿದ್ದಾರೆ. ಟ್ರ್ಯಾಕ್ಟರ್ ಭರಾಟೆ ನಡುವೆ ಕಾಣೆಯಾಗಿರುವ ಎತ್ತಿನಗಾಡಿಯಲ್ಲಿ ಮಕ್ಕಳನ್ನು ಕರೆತಂದಿದ್ದು ವಿಶೇಷವಾಗಿದ್ದು ಇಂದಿನ ಶಾಲಾರಂಭದಲ್ಲಿ ಗ್ರಾಮಸ್ಥರು ಭಾಗಿಯಾಗಿರುವುದು ಮಾದರಿಯಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ 4 ದಿನ ಭಾರಿ ಮಳೆ ಮುನ್ಸೂಚನೆ: ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ