ಮೈಸೂರು: ಡ್ರಗ್ ನಶೆ ಧಾರ್ಮಿಕ, ವೈದ್ಯಕೀಯ, ಶಿಕ್ಷಣ, ಕ್ರೀಡಾ ಎಲ್ಲಾ ಕ್ಷೇತ್ರದಲ್ಲೂ ಇದೆ. ಹಾಗೆಯೇ ಸಿನಿಮಾ ಕ್ಷೇತ್ರದಲ್ಲೂ ಡ್ರಗ್ ಸೇವನೆಯಿದೆ. ಆದರೆ, ಇಷ್ಟರ ಮಟ್ಟಿಗೆ ವ್ಯವಸ್ಥೆಯನ್ನು ದಿಕ್ಕೆಡಿಸುವ ಹಂತಕ್ಕೆ ತಲುಪಿರುವುದು ನೋವಿನ ಸಂಗತಿ ಎಂದು ನಟ ಮಂಡ್ಯ ರಮೇಶ್ ಬೇಸರ ವ್ಯಕ್ತಪಡಿದ್ದಾರೆ.
ನಗರದ ರಾಮಕೃಷ್ಣನಗರದಲ್ಲಿರುವ ನಟನಾ ಸಂಸ್ಥೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡ್ರಗ್ ನಶೆ ಯಾವ ಕ್ಷೇತ್ರದಲ್ಲಿಲ್ಲ? ಧಾರ್ಮಿಕ, ವೈದ್ಯಕೀಯ, ಶಿಕ್ಷಣ, ಕ್ರೀಡಾ ಎಲ್ಲಾ ಕ್ಷೇತ್ರದಲ್ಲೂ ಇದೆ. ಹಾಗೆಯೇ ಸಿನಿಮಾ ಕ್ಷೇತ್ರದಲ್ಲೂ ಡ್ರಗ್ ಸೇವನೆಯಿದೆ. ಆದರೆ, ಇಷ್ಟರ ಮಟ್ಟಿಗೆ ವ್ಯವಸ್ಥೆಯನ್ನು ದಿಕ್ಕೆಡಿಸುವ ಹಂತಕ್ಕೆ ತಲುಪಿರುವುದು ನೋವಿನ ಸಂಗತಿ. ಸಿನಿಮಾದವರಾಗಲಿ, ಮನೆಯವರಾಗಲಿ, ಸ್ವಾಮೀಜಿಗಳಾಗಲಿ ಅಥವಾ ರಾಜಕಾರಣಿಗಳಾಗಲಿ ತಪ್ಪು ಯಾರೇ ಮಾಡಿದರೂ ತಪ್ಪು ತಪ್ಪೇ. ಆದರೆ, ಅದನ್ನು ಸಿನಿಮಾದವರು ಮಾಡಿದಾಗ ಎದ್ದು ಕಾಣುತ್ತದೆ.
ನನ್ನ 37 ವರ್ಷಗಳ ಕಲಾವೃತ್ತಿಯಲ್ಲಿ ಡ್ರಗ್ ಮಾಫಿಯಾ ಸಿನಿಮಾ ರಂಗದಲ್ಲಿ ಇಷ್ಟೊಂದು ಆಳವಾಗಿ ಬೇರು ಬಿಟ್ಟಿರುವುದು ಗೊತ್ತಿರಲಿಲ್ಲ. ಈ ವಿಷಯ ಕೇಳಿ ನನಗೆ ತುಂಬಾ ಶಾಕ್ ಆಗಿದೆ. ತಪ್ಪನ್ನು ಒಪ್ಪಿಕೊಂಡು ಎಲ್ಲರೂ ಸರಿ ಮಾರ್ಗದಲ್ಲಿ ನಡೆಯಬೇಕು. ಅದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಯುವ ಪೀಳಿಗೆ ದಿಕ್ಕು ತಪ್ಪಬಾರದು. ತಪಸ್ಸಿನ ಹೆಸರಿನಲ್ಲಿ ಭಂಗಿ ಬಾಬಾಗಳಾದರೆ, ಅದು ತಪಸ್ಸಾಗಲ್ಲ. ಯಾವುದೇ ಯಶಸ್ಸು ಗಳಿಸಬೇಕಾದರೆ ಕಠಿಣ ತಪಸ್ಸು ಮಾಡಬೇಕು. ಮುಂದಿನ ತಲೆಮಾರು ಯಶಸ್ಸಿಗಾಗಿ ದಾರಿ ತಪ್ಪಬಾರದು. ಪರಿಶ್ರಮವಿದ್ದರೆ, ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರಲಿದೆ ಎಂದರು.