ಮೈಸೂರು : ದೇಶದ ಅತ್ಯಂತ ಸಂತೋಷದಾಯಕ ನಗರಗಳಲ್ಲಿ ಒಂದು ಎಂದು ಅರಮನೆ ನಗರ ಮೈಸೂರನ್ನು ಬ್ರ್ಯಾಂಡ್ ಮಾಡಿ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಅನುಸಂಧಾನಗೊಳಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಐಟಿ ಬಿಟಿ, ವಿಜ್ಞಾನ-ತಂತ್ರಜ್ಞಾನ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದರು.
ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಸಂವಾದ ನಡೆಸಿದ ಅವರು, ಮೈಸೂರು ಜಾಗತಿಕ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ನಗರವಾಗಿದೆ. ಅಲ್ಲದೇ, ಮೈಸೂರು ವಿಶ್ವವಿದ್ಯಾಲಯ, ಜೆಎಸ್ಎಸ್ ವಿವಿ ಸೇರಿದಂತೆ ದೇಶದ ಅತ್ಯುತ್ತಮ ವಿವಿಗಳು ಇಲ್ಲಿವೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳನ್ನು ಲಿಂಕ್ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.
ಆದ್ಯತೆ ಮೇರೆಗೆ ಸಮಸ್ಯೆ ನಿವಾರಣೆ : ಮೈಸೂರಿನಲ್ಲಿ ಏನೆಲ್ಲ ಚೆನ್ನಾಗಿದೆ, ಏನೆಲ್ಲ ಸಮಸ್ಯೆಗಳಿವೆ ಎಂಬ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇದೆ. ಕೊರತೆಗಳನ್ನು ಆದ್ಯತೆಯ ಮೇರೆಗೆ ನಿವಾರಣೆ ಮಾಡಲಾಗುವುದು. ಇಂದು ನಗರದಲ್ಲಿ ಆರಂಭವಾದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಒಪ್ಪಂದ ಆಗಿ ಎರಡೂ ಕ್ಷೇತ್ರಗಳನ್ನು ಒಂದು ಕ್ಲಸ್ಟರ್ ರೀತಿಯಲ್ಲಿ ರೂಪಿಸಿ ಕೈಗಾರಿಕಾಭಿವೃದ್ಧಿ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ. ಆ ದಿಕ್ಕಿನಲ್ಲಿ ಪ್ರಯತ್ನಗಳು ಆರಂಭವಾಗಿವೆ ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದರು.
ರೋಬೊಟಿಕ್ಸ್ ಕೈಗಾರಿಕೆ ಸ್ಥಾಪನೆ : ರೋಬೊಟಿಕ್ಸ್ ಕೈಗಾರಿಕೆ ಸ್ಥಾಪನೆ ಬಗ್ಗೆ ಕೆಲ ಉದ್ದಿಮೆದಾರರು ಗಮನ ಸೆಳೆದಾಗ, ಈ ಕ್ಷೇತ್ರಕ್ಕೆ ಅಗತ್ಯ ಸಾಮಾನ್ಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸರ್ಕಾರ ಕೂಡಲೇ ಕ್ರಮವಹಿಸುತ್ತದೆ. ಪೂರಕ ಕೈಗಾರಿಕೆಗಳ ಸ್ಥಾಪನೆಗೂ ಉತ್ಸುಕವಾಗಿದೆ ಎಂದರು.
ಡಿಜಿಟಲ್ ಸ್ವರೂಪದ ಉದ್ಯೋಗಾವಕಾಶಗಳು : ಮುಂದಿನ ದಿನಗಳಲ್ಲಿ ಡಿಜಿಟಲ್ ಸ್ವರೂಪದ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. 'ಮನೆಯಲ್ಲೇ ಕೆಲಸ' ಪರಿಕಲ್ಪನೆ ಇನ್ನಷ್ಟು ವ್ಯಾಪಕವಾಗಲಿದೆ. ಈ ಹಿನ್ನೆಲೆಯಲ್ಲಿ ಎರಡನೇ, ಮೂರನೇ ಹಂತದ ನಗರಗಳಿಗೆ ಜನರು ಹೆಚ್ಚೆಚ್ಚು ಬರುತ್ತಿದ್ದಾರೆ. ಹೀಗಾಗಿ, ಇಂತಹ ನಗರಗಳಲ್ಲಿ ಉತ್ತಮ ರೀತಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣ : ಮೈಸೂರು ನಗರದಲ್ಲಿ 300ರಿಂದ 400 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಪ್ರತ್ಯೇಕ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣ ಮಾಡುವ ಬಗ್ಗೆಯೂ ಉದ್ದಿಮೆದಾರರು ಸಚಿವರ ಮುಂದೆ ಬೇಡಿಕೆ ಮಂಡಿಸಿದರು. ಈ ಬೇಡಿಕೆಗೆ ಉತ್ತರಿಸಿದ ಸಚಿವರು, ಪ್ರತ್ಯೇಕ ಸಾಫ್ಟ್ ವೇರ್ ಪಾರ್ಕ್ ನಿರ್ಮಾಣ ಮಾಡುವುದು ಲಾಭದಾಯಕವೇ ಎಂಬ ಬಗ್ಗೆಯೂ ಯೋಚನೆ ಮಾಡಬೇಕಿದೆ.
ಈಗ ಐಟಿ ಕ್ಷೇತ್ರದ ಕೆಲ ಕಂಪನಿಗಳು ಹೆಚ್ಚಾಗಿ ವರ್ಕ್ ಫ್ರಮ್ ಹೋಂ ಕಡೆಗೆ ಹೆಚ್ಚು ವಾಲುತ್ತಿರುವ ಕಾರಣಕ್ಕೆ ಕಚೇರಿಗಳ ಸ್ಥಾಪನೆಯ ಬಗ್ಗೆಯೇ ಮರು ಆಲೋಚನೆ ಮಾಡುತ್ತಿವೆ. ಇನ್ನು, ಕೆಲ ಕಂಪನಿಗಳು ಸ್ವಂತ ಕಟ್ಟಡಗಳಿಗಿಂತ ಬಾಡಿಗೆ ಕಟ್ಟಡಗಳೇ ಸಾಕು ಎನ್ನುವ ಮಾತನ್ನಾಡುತ್ತಿವೆ ಎಂದರು.
ಇದನ್ನೂ ಓದಿ: ಹೊಸಪೇಟೆಗೆ ಬಂದಿಳಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ದಂಪತಿ: ಬಿಗಿ ಬಂದೋಬಸ್ತ್..
ಮೈಸೂರಿನ ರಾಜವಂಶಸ್ಥ ಯದುವೀರ್ ಚಾಮರಾಜ ಒಡೆಯರ್, ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ ಎಸ್ ರಮಣ ರೆಡ್ಡಿ ಹಾಗೂ ಅಧಿಕಾರಿಗಳು ಇದ್ದರು.