ಮೈಸೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ತನಿಖೆಯ ಮುಂಚೆಯೇ ಗೃಹ ಸಚಿವರು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸಿದ್ದಾರೆ. ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.
ನಗರದಲ್ಲಿ ಈ ಟಿವಿ ಭಾರತ್ ಜೊತೆ ಮಾತನಾಡಿ, ಆರೋಪಿ ಆದಿತ್ಯ ರಾವ್ ತಾನೆ ಬಾಂಬ್ ಇಟ್ಟಿದ್ದು ಎಂದು ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ತನಿಖಾ ಹಂತದಲ್ಲಿರುವಾಗಲೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆತ ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡುವ ಮೂಲಕ ಪ್ರಕರಣವನ್ನು ದಿಕ್ಕು ತಪ್ಪಿಸಿ ಮುಚ್ಚಿ ಹಾಕುವ ಷಡ್ಯಂತರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ಸಮುದಾಯದ ಬಗ್ಗೆ ಪ್ರಚೋದನಕಾರಿ ಹಾಗೂ ಸಮುದಾಯವನ್ನು ನಿಂದಿಸುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಶಾಸಕ ರೇಣುಕಾಚಾರ್ಯ ಅವರ ಮೇಲೆ ಸುಮೊಟೊ ಕೇಸ್ ದಾಖಲಿಸಿ ತಕ್ಷಣ ಬಂದಿಸಬೇಕು. ಈಗಾಗಲೇ ಎಸ್ಡಿಪಿಐ ರಾಜ್ಯಾಧ್ಯಕ್ಷರು ಬೆಂಗಳೂರಿನಲ್ಲಿ ರೇಣುಕಾಚಾರ್ಯ ವಿರುದ್ಧ ದೂರು ದಾಖಲಿಸಿದ್ದು ಅವರನ್ನು ಬಂಧಿಸದಿದ್ದರೆ ರಾಜ್ಯದ್ಯಾಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪಕ್ಷವನ್ನು ಬ್ಯಾನ್ ಮಾಡುವ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.