ಮೈಸೂರು: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಇಂತಹ ಅಪವಾದದ ನಡುವೆಯೂ ಮೈಸೂರಿನ ಕೆಆರ್ ಸರ್ಕಾರಿ ಆಸ್ಪತ್ರೆ ಬಡ ಕೂಲಿ ಕಾರ್ಮಿಕನ ಜೀವಕ್ಕೆ ಮರಳಿ ದುಡಿಯಲು ಕೈ ನೀಡಿರುವಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತಮಿಳುನಾಡು ಗಡಿ ಭಾಗದ ಜೆಲ್ಲಿಪಾಳ್ಯ ಗ್ರಾಮದ ಚಿನ್ನಪ್ಪಯ್ಯನ್ ಎಂಬ ವ್ಯಕ್ತಿ ಕಳೆದ ಫೆಬ್ರವರಿ 12ರಂದು ಸಂಬಂಧಿಕರ ಮನೆಯ ತೆಂಗಿನಮರವನ್ನು ಕಡಿಯುವಾಗ ಆಕಸ್ಮಿಕವಾಗಿ ಹರಿತವಾದ ಆಯುಧ ಅವರ ಎಡಗೈಯನ್ನು ಕತ್ತರಿಸಿತ್ತು. ತೀವ್ರ ರಕ್ತ ಸ್ರಾವದಿಂದ ಮೂರ್ಛೆ ಹೋದ ಚಿನ್ನಪ್ಪಯ್ಯನ್ರನ್ನು ಸಮೀಪದ ಸರ್ಕಾರಿ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯ್ತು. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಹೋಗಲು ಹಣವಿಲ್ಲದ ಕಾರಣ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಲ್ಲಿಗೆ ಬರುವ ಹೊತ್ತಿಗೆ ಆರು ಗಂಟೆ ಕಳೆದಿದ್ದರಿಂದ ವೈದ್ಯರು ಈ ಪ್ರಕರಣವನ್ನು ಸವಾಲಾಗಿ ಪರಿಗಣಿಸಿ, ಸತತ 6 ಗಂಟೆಗಳ ಕಾಲ ಆಪರೇಷನ್ ಮಾಡಿ ಈ ಕೂಲಿ ಕಾರ್ಮಿಕನ ಕೈಯನ್ನು ಜೋಡಿಸಿದ್ದಾರೆ. ಅಷ್ಟೇ ಅಲ್ಲ, ಒಂದೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲೇ ಉಚಿತ ಚಿಕಿತ್ಸೆ ನೀಡಿದ್ದು, ಈಗ ವ್ಯಕ್ತಿ ಗುಣಮುಖನಾಗಿದ್ದಾನೆ.
ಈ ಘಟನೆ ಬಗ್ಗೆ ಗಾಯಗೊಂಡಿದ್ದ ಚಿನ್ನಪ್ಪಯ್ಯನ್ ತಮಿಳಿನಲ್ಲಿ ವಿವರಿಸಿದ್ದಾರೆ. ಇನ್ನು ಈ ಘಟನೆಯನ್ನು ನೆನೆದು ಹಾಗೂ ಸರ್ಕಾರಿ ವೈದ್ಯರು ತನ್ನ ಗಂಡನ ಕೈಯನ್ನು ಉಳಿಸಿರುವುದನ್ನು ನೆನೆದು ಹೆಂಡತಿ ಸಂತಸಪಡುತ್ತಾರೆ.
ಗಾಯಗೊಂಡ ಈ ವ್ಯಕ್ತಿ ಆಸ್ಪತ್ರೆಗೆ ಬರುವ ವೇಳೆಗಾಗಲೇ ಸಮಯ ಮೀರಿತ್ತು. ಆದರೂ ಸವಾಲಿನಿಂದ ಕೂಡಿದ ಈ ಪ್ರಕರಣವನ್ನು ವೈದ್ಯರ ತಂಡ ಅಗತ್ಯ ರಕ್ತವನ್ನು ನೀಡಿ ಆಪರೇಷನ್ ಮಾಡಿದೆ. ವ್ಯಕ್ತಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಇನ್ನೂ 5-6 ತಿಂಗಳಲ್ಲಿ ಸಾಮಾನ್ಯರಂತೆ ಕೈಯಾಡಿಸಬಹುದು. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಆಪರೇಷನ್ಗೆ ಕನಿಷ್ಠ ಐದರಿಂದ ಹತ್ತು ಲಕ್ಷ ಖರ್ಚಾಗುತ್ತದೆ. ಆದರೆ ಈ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯ ಸಹಾಯದಿಂದ ಉಚಿತವಾಗಿ ಆಪರೇಷನ್ ಮಾಡಿದ್ದಾಗಿ ಡಾ. ವಿಜಯ್ ಕುಮಾರ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.