ಮೈಸೂರು: ಸಿಸಿಬಿ ಪೊಲೀಸರಿಂದ ಮೂರು ಮಂದಿ ಮನೆಗಳ್ಳರ ಬಂಧಿಸಿ, ಬಂಧಿತರಿಂದ 15 ಲಕ್ಷ ರೂ. ಮೌಲ್ಯದ 304 ಗ್ರಾಂ ತೂಕದ ಚಿನ್ನಾಭರಣ ಹಾಗೂ 1 ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.
ಇತ್ತೀಚೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ ವರದಿಯಾಗುತ್ತಿರುವ ಮನೆ ಕಳವು ಪ್ರಕರಣಗಳನ್ನು ಭೇದಿಸಲು ಹಾಗೂ ಅಪರಾಧ ತಡೆ ಮಾಸದ ಪ್ರಯುಕ್ತ ವಿಶೇಷ ಗಮನ ಹರಿಸಿ ಸ್ವತ್ತಿನ ಪ್ರಕರಣಗಳನ್ನು ಪತ್ತೆ ಮಾಡಲು ಮೈಸೂರು ನಗರ ಪೊಲೀಸ್ ಆಯುಕ್ತರು ಸಿಸಿಬಿ ಘಟಕದ ಅಧಿಕಾರಿಗಳ ಮತ್ತು ಸಿಬ್ಬಂದಿಗಳಿದ್ದ ಒಂದು ವಿಶೇಷ ತಂಡ ರಚಿಸಲಾಗಿದೆ.
ಈ ತಂಡವು ಡಿ.9ರಂದು ಹಾಗೂ ಡಿ.19 ರಂದು ಮೂವರು ಮನೆ ಕಳವು ಆರೋಪಿಗಳನ್ನು ಬಂಧಿಸಿ, ವಿಚಾರ ನಡೆಸಿದಾಗ ಆರೋಪಿಗಳು ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳವು ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಆರೋಪಿಗಳಿಂದ ಉದಯಗಿರಿ ಠಾಣೆಯ 2 ಮನೆ ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ 15 ಲಕ್ಷ ರೂ. ಮೌಲ್ಯದ 304 ಗ್ರಾಂ ತೂಕದ ಚಿನ್ನಾಭರಣಗಳು, ಆರೋಪಿಗಳು ಕೃತ್ಯವೆಸಗಲು ಬಳಸುತ್ತಿದ್ದ ಪರಿಕರಗಳು ಹಾಗೂ ಯಮಹಾ ಪ್ಯಾಸಿನೋ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಮದ್ಯ ಕುಡಿಸಿ ಅಶ್ಲೀಲ ಫೋಟೋ, ವಿಡಿಯೋ ತೆಗೆದು ಬ್ಲಾಕ್ ಮೇಲ್: ಯುವತಿ ವಿರುದ್ಧ ಯುವಕನ ದೂರು..!
ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಆರೋಪಿಯ ವಿರುದ್ದ ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 30 ವಾರಂಟ್‌ಗಳು ಇದ್ದು, ಮತ್ತೊಬ್ಬ ಆರೋಪಿಯ ವಿರುದ್ದ ಮೈಸೂರು ನಗರ ಮಂಡಿ ಠಾಣೆಯಲ್ಲಿ 4 ವಾರಂಟ್‌ಗಳಿವೆ. ಮೂರನೇ ಆರೋಪಿಯ ವಿರುದ್ಧ 1 ಕೊಲೆ ಪ್ರಕರಣ, 2 ಕೊಲೆ ಪ್ರಯತ್ನ, 1 ಮನೆ ಕಳ್ಳತನ, 1 ಸುಲಿಗೆ ಪ್ರಕರಣಗಳ ಆರೋಪಿಯಾಗಿದ್ದಾನೆ.
ಇದೇ ವಿಶೇಷ ತಂಡವು ಡಿ.9 ರಂದು ಮೈಸೂರು ಜಿಲ್ಲೆಗೆ ಸೇರಿದ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿಯೊಬ್ಬನನ್ನು ವಶಕ್ಕೆ ಪಡೆದು, ಮೈಸೂರು ಜಿಲ್ಲೆ ಜಯಪುರ ಪೊಲೀಸರ ವಶಕ್ಕೆ ನೀಡಿದ್ದಾರೆ. ಈತನ ವಿರುದ್ದ 15 ವಾರಂಟ್‌ಗಳಿವೆ.