ಮೈಸೂರು: ದುಷ್ಕರ್ಮಿಗಳು ಚಿನ್ನದ ವ್ಯಾಪಾರಿ ಕಾರು ತಡೆದು ಹಲ್ಲೆ ನಡೆಸಿ ಸಿನಿಮೀಯ ರೀತಿಯಲ್ಲಿ 1 ಕೋಟಿ ರೂ. ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ.
ಮಾರ್ಚ್ 16 ರ ಬೆಳಗಿನ ಜಾವ ಕೇರಳದ ಕಣ್ಣೂರು ಜಿಲ್ಲೆಯ ಬಾನುರಿನ ಸ್ವಪ್ನ ಜ್ಯುವೆಲ್ಲರಿ ಮಾಲೀಕ ಸುರಾಜ್, ಚಿನ್ನ ಮಾರಿ 1 ಕೋಟಿ ರೂ. ಹಣವನ್ನು ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ಹುಣಸೂರು - ಮಡಿಕೇರಿ ಹೆದ್ದಾರಿಯ ಯಶೋಧರ ಪುರ ಬಳಿ 2 ಕಾರಿನಲ್ಲಿ ಬಂದ ದರೋಡೆಕೋರರು ಚಿನ್ನದ ವ್ಯಾಪಾರಿ ಮೇಲೆ ಹಲ್ಲೆ ಮಾಡಿ 1 ಕೋಟಿ ಹಣ ರೂ.ಹಣ ದೋಚಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸರಿಯಾದ ಮಾಹಿತಿ ನೀಡದ ದೂರುದಾರ:
ಚಿನ್ನ ಮಾರಿ 1 ಕೋಟಿ ರೂ. ತೆಗೆದುಕೊಂಡು ಬರುವಾಗ ದರೋಡೆ ನಡೆದಿದೆ ಎಂದು ಹೇಳುವ ಚಿನ್ನದ ವ್ಯಾಪಾರಿ ಸುರಾಜ್, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಯನ್ನು ತೋರಿಸುತ್ತಿಲ್ಲ. ಬಾಂಬೆ ವ್ಯಕ್ತಿಗೆ ಬೆಂಗಳೂರಿನಲ್ಲಿ ಚಿನ್ನ ಮಾರಿ 1 ಕೋಟಿ ರೂ. ಹಣವನ್ನು ಪಡೆದಿದ್ದೆ. ಈ ರೀತಿಯ ವ್ಯವಹಾರವು ಕೇವಲ ನಂಬಿಕೆ ಮೇಲೆ ನಡೆಯುತ್ತದೆ. ಇದಕ್ಕೆ ದಾಖಲೆಗಳು, ರಸೀದಿಗಳು ಇರುವುದಿಲ್ಲ. ಎಲ್ಲವೂ ನಂಬಿಕೆ ಮೇಲೆಯೇ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದಾನೆ. ಇತನ ಹೇಳಿಕೆ ಪೊಲೀಸರಲ್ಲಿ ಅನುಮಾನಗಳನ್ನು ಹುಟ್ಟು ಹಾಕಿದೆ. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ಸುರಾಜ್ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ತನಿಖೆಗೆ 3 ತಂಡ ರಚನೆ:
ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹುಣಸೂರು ವಿಭಾಗದ ಡಿವೈಎಸ್ಪಿ ರವಿಪ್ರಸಾದ್ ಅಪರಾಧ ವಿಭಾಗದಲ್ಲಿ 3 ಪೊಲೀಸ್ ತಂಡವನ್ನು ರಚನೆ ಮಾಡಿದ್ದಾರೆ. ಒಂದು ತಂಡ ಬೆಂಗಳೂರಿಗೆ, ಮತ್ತೊಂದು ತಂಡ ಕೇರಳದ ಕಣ್ಣೂರಿಗೆ ಹಾಗೂ 3ನೇ ತಂಡ ಸ್ಥಳೀಯವಾಗಿ ತನಿಖೆ ಕೈಗೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಕೇರಳದ ತ್ರಿಶ್ಯೂರು ,ಕಣ್ಣೂರು ಮುಂತಾದ ನಗರಗಳಲ್ಲಿ ಚಿನ್ನದ ವ್ಯಾಪಾರಿಗಳು ಹವಾಲಾ ಹಣ ಸಂಗ್ರಹಣೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.