ಮೈಸೂರು : ವಿದ್ಯಾರ್ಥಿಯೋರ್ವ 3 ಖಾಲಿ ಬಾಟಲಿಗಳ ಮೇಲೆ 30 ಸೆಕೆಂಡ್ಸ್ನಲ್ಲಿ 27 ಬಾರಿ ಪುಷ್ ಅಪ್ ಮಾಡಿ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಮೈಸೂರು ವಿವಿಯ ಮಹಾರಾಜ ಕಾಲೇಜಿನಲ್ಲಿ ಓದುತ್ತಿರುವ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಡಿ ಎಸ್ ತೇಜಸ್ ಅವರು, 3 ಖಾಲಿ ಗಾಜಿನ ಬಾಟಲಿಗಳ ಮೇಲೆ 30 ಸೆಕೆಂಡ್ಸ್ಗಳಲ್ಲಿ 27 ಬಾರಿ ಪುಷ್‌ಅಪ್ ಮಾಡಿ ಗಿನ್ನೆಸ್ ದಾಖಲೆ ಮಾಡಿದ್ದಾರೆ.
ಕರಾಟೆ ಪಟುವಾದ ತೇಜಸ್ ಶ್ರೀರಾಂಪುರದಲ್ಲಿರುವ ಕರಾಟೆ ಡೂ ಗೊಜುಕಾನ್ ಅಸೋಸಿಯೇಷನ್ ಇಂಡಿಯಾ ಹಾಗೂ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದು, ಇದೇ ವರ್ಷ ಏಪ್ರಿಲ್ 7ರಂದು 3 ಖಾಲಿ ಗಾಜಿನ ಬಾಟಲಿನ ಮೇಲೆ ಪುಷ್ ಅಪ್ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ದಾಖಲೆಯ ಪುಸ್ತಕ್ಕೆ ಸೇರ್ಪಡೆಯಾಗಿದ್ದಾರೆ.
ವಿದ್ಯಾರ್ಥಿ ತೇಜಸ್ ಕರಾಟೆಯಲ್ಲಿ ಮಾಡಿದ ಸಾಧನೆಗಳು : ವಿದ್ಯಾಭ್ಯಾಸದ ಜೊತೆಗೆ ಕರಾಟೆ ತರಬೇತಿ ಪಡೆದುಕೊಂಡು ಅಂತರ್ ವಿವಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಗೆದ್ದು ಹಲವಾರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
2019ರಲ್ಲಿ ನಡೆದ ಮೈಸೂರು ವಿವಿ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಕರಾಟೆ 55 ಕೆಜಿ ವಿಭಾಗದಲ್ಲಿ ಪ್ರಥಮ, ರಾಜ್ಯ ಮಟ್ಟದ ದಸರಾ ಕರಾಟೆ ಚಾಂಪಿಯನ್ ಷಿಪ್ನಲ್ಲಿ ಪ್ರಥಮ ಹಾಗೂ 55 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ, 2019ರಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪ್ರಥಮ, ಮೈಸೂರು ಜಿಲ್ಲಾ ಅಂತರ ಕ್ಲಬ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ, ರಾಜ್ಯಮಟ್ಟದ ಮುಕ್ತ ಇ-ಕಟಾ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ, ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ ಇ- ಕಟಾ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಹಾಗೂ ರಾಜ್ಯಮಟ್ಟದ ಗೊಜುವಾರಿಯರ್ಸ್ ಕಪ್ ಪಂದ್ಯಾವಳಿಯಲ್ಲಿ ಪ್ರಥಮ, ಅಲ್ಲದೆ ವಿದ್ಯಾರ್ಥಿ ತೇಜಸ್ 2019ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಕರಾಟೆ ಲೀಗ್ ಮತ್ತು 2020ರಲ್ಲಿ ಚೆನ್ನೈನಲ್ಲಿ ನಡೆದ ಅಖಿಲ ಭಾರತ ಅಂತರ ವಿವಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುವ ಕನಸನ್ನು ಕಂಡಿದ್ದಾರೆ.
ಈ ಬಗ್ಗೆ ತೇಜಸ್ ಹೇಳೋದೇನು? : ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ತರಬೇತಿ ಉತ್ತಮವಾಗಿದೆ. ಕರಾಟೆ ತರಬೇತಿ ಹಾಗೂ ವಿವಿಧೆಡೆ ನಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಲು ಮೈಸೂರು ವಿವಿ ಪ್ರೋತ್ಸಾಹ ನೀಡುತ್ತಿದೆ. ಜೊತೆಗೆ ಕರಾಟೆ ಡೂ ಗೊಜುಕಾನ್ ಅಸೋಸಿಯೇಷನ್ ಇಂಡಿಯಾ ಆಕಾಡೆಮಿಯಿಂದಲೂ ಉತ್ತಮ ಸಹಕಾರ ದೊರಕುತ್ತಿದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ದೇಶ ಪ್ರತಿನಿಧಿಸಬೇಕು ಎಂಬುದು ನನ್ನ ಕನಸಾಗಿದೆ ಎಂದು ತೇಜಸ್ ಹೇಳಿಕೊಂಡಿದ್ದಾರೆ.
ಕೇವಲ ಖಾಲಿ ಬಾಟಲಿಯಲ್ಲಿ ಪುಷ್ ಅಪ್ ಮಾಡಿ ಗಿನ್ನೆಸ್ ದಾಖಲೆ ಬರೆದಿರುವ ವಿದ್ಯಾರ್ಥಿ ತೇಜಸ್ಗೆ ಇದೀಗ ಅಭಿನಂದನೆಗಳ ಪೂರವೇ ಹರಿದು ಬಂದಿದೆ. ತೇಜಸ್ ಅವರು ಕರಾಟೆ ಪಟುವಾಗಿದ್ದರೂ ಸಹ ಈ ರೀತಿ ಸಾಧನೆ ಮಾಡಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.