ಮಂಗಳೂರು: ದೇಶಕ್ಕೆ ಸ್ವಾತಂತ್ರ್ಯ ದೊರಕಿ 70 ವರ್ಷಗಳಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಹಾಗೂ ಅಭಿವೃದ್ಧಿಗಳಾಗಿವೆ. ಆದರೆ ಇಂದಿನ ಯುವಜನತೆ ಯಾವ ಮಟ್ಟವನ್ನು ತಲುಪಬೇಕಿತ್ತೋ ಅದು ಆಗಿಲ್ಲವೆಂದು ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಡಾ. ಕನ್ಹಯ್ಯ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಸಹೋದಯ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಡೆದ ಬಿ. ವಿ. ಕಕ್ಕಿಲ್ಲಾಯ ಜನ್ಮ ಶತಾಬ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆತ್ತವರು ಬಾಲ್ಯದಿಂದಲೇ ಮಕ್ಕಳಿಗೆ ರಾಜನೀತಿ, ರಾಜಕಾರಣಿಗಳ ಬಗ್ಗೆ ಕೆಟ್ಟದಾಗಿ ಬಿಂಬಿಸುತ್ತಾರೆ ಮತ್ತು ಪ್ರಶ್ನಿಸುವ ಹಕ್ಕಿನಿಂದಲೇ ಮಕ್ಕಳನ್ನು ದೂರ ಇರಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದಿನ ಯುವ ಸಮುದಾಯ ತಮ್ಮದೇ ಗ್ರಾಮ, ಜಿಲ್ಲೆ, ರಾಜ್ಯಗಳ ಇತಿಹಾಸವನ್ನು ಅರಿಯುವ ಪ್ರಯತ್ನ ಮಾಡುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಧ್ಯಯನ ಮಾಡುವ ಗೋಜಿಗೆ ಹೋಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಮ್ಮ ದೇಶ, ಇತರೆ ದೇಶಗಳ ಬಗ್ಗೆ ತಿಳಿಯುವುದಾದರೂ ಹೇಗೆ ಎಂದು ಕನ್ಹಯ್ಯ ಪ್ರಶ್ನಿಸಿದರು.
ಇನ್ನು ಇದೇ ವೇಳೆ ಮಾತನಾಡಿದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್ ಜೀತ್ ಕೌರ್, ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ ಸರ್ಕಾರ, ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸುವ ನೀತಿಯನ್ನು ಅನುಸರಿಸುತ್ತಿದೆ. 2014ರ ಬಳಿಕ ಕಾರ್ಮಿಕರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಆರೋಪಿಸಿದರು.
ಕಾರ್ಮಿಕರ ಸಂರಕ್ಷಣೆಗೆ ನಮ್ಮ ಸಂವಿಧಾನದಲ್ಲಿ ಸಾಕಷ್ಟು ಕಾನೂನುಗಳಿದ್ದರೂ, ಅವು ಅನುಷ್ಠಾನಗೊಳ್ಳುತ್ತಿಲ್ಲ. 2014ರಿಂದ 2019ರವರೆಗಿನ ಸರ್ಕಾರದ ನೀತಿಯು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಸಂಸತ್ತಿನಲ್ಲಿಯೇ ನಮ್ಮ ಜನಪ್ರತಿನಿಧಿಗಳು ಕಾರ್ಮಿಕರ ಹಕ್ಕುಗಳ ವಿರುದ್ಧ ಸವಾರಿ ಮಾಡುತ್ತಿರುವಂತೆ ಕಾಣುತ್ತಿದೆ. ದೇಶದಲ್ಲಿ ಶೇ.95 ರಷ್ಟು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಸರ್ಕಾರ ಹಾಗೂ ಸಾರ್ವಜನಿಕ ವಲಯಗಳಲ್ಲಿ ಬಹಳಷ್ಟು ಉದ್ಯೋಗಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೀಡಲಾಗುತ್ತಿದೆ ಎಂದರು.