ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲೈಸನ್ಸ್ ಇಲ್ಲದ ಗನ್ನೊಂದಿಗೆ ಇದ್ದ ಯುವಕನನ್ನು ಸಿಐಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ಹಾವಂಜೆಯ ರೊನಾಲ್ಡ್ ಡಿ ಸೋಜ (24) ಬಂಧಿತ ಆರೋಪಿ. ಈತನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಬಳಿ ಸಿಐಎಸ್ಎಫ್ ಅಧಿಕಾರಿಗಳು ಬಂಧಿಸಿದ್ದರು.
ರೊನಾಲ್ಡ್ ಡಿಸೋಜ ಅವರು ಮಂಗಳವಾರದಂದು ಕುವೈಟ್ನಿಂದ ಏರ್ ಇಂಡಿಯಾ ವಿಮಾನದಲ್ಲಿ ಬರುತ್ತಿದ್ದ ಸಂಬಂಧಿಕರನ್ನು ಕರೆದುಕೊಂಡು ಬರಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇವರ ಕಾರನ್ನು ಪಾರ್ಕಿಂಗ್ ಮಾಡಿದ್ದ ವೇಳೆ ಸಿಐಎಸ್ಎಫ್ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಕಾರಿನಲ್ಲಿ ಪರವಾನಿಗೆ ಇಲ್ಲದ ಎರಡು ನಾಡಬಂದೂಕುಗಳು ಪತ್ತೆಯಾಗಿವೆ.
ರೊನಾಲ್ಡ್ ಡಿಸೋಜನನ್ನು ಬಂಧಿಸಿದ ಸಿಐಎಸ್ಎಫ್ ಅಧಿಕಾರಿಗಳು ಈತನನ್ನು ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಳಿಕ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.