ಸುಳ್ಯ (ದಕ್ಷಿಣ ಕನ್ನಡ): ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ (67) ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದಲ್ಲಿರುವ ಸ್ವಗೃಹದಲ್ಲಿ ಬೆಳಗ್ಗೆ 7.45ಕ್ಕೆ ಅವರು ಕೊನೆಯುಸಿರೆಳೆದರು.
1955ರ ಜನವರಿ 21ರಂದು ಕಲ್ಮಡ್ಕ ಗ್ರಾಮದಲ್ಲಿ ಪದ್ಯಾಣ ತಿರುಮಲೇಶ್ವರ ಭಟ್ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ ಜನಿಸಿದ ಗಣಪತಿ ಭಟ್, ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಬಾಲ್ಯದಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದ ಇವರು ಧರ್ಮಸ್ಥಳದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಗುರು ಮಾಂಬಾಡಿ ನಾರಾಯಣ ಭಾಗವತರ ಬಳಿ ಭಾಗವತಿಕೆ ಅಭ್ಯಾಸ ಮಾಡಿದ್ದಾರೆ. ಬಳಿಕ ಸುಮಾರು 35 ವರ್ಷಕ್ಕೂ ಅಧಿಕ ಕಾಲ ಸುರತ್ಕಲ್ ಮೇಳ, ಮಂಗಳಾದೇವಿ ಮೇಳ, ಎಡನೀರು ಮೇಳ, ಹನುಮಗಿರಿ ಮೇಳ ಸೇರಿದಂತೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಭಾಗವತರಾಗಿದ್ದರು.
ಇದನ್ನೂ ಓದಿ: ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ ನಿಧನ
ಭಟ್ ಅವರು ಸುರತ್ಕಲ್ ಮೇಳದಲ್ಲಿದ್ದಾಗ ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರರಾಮ, ರಾಜಾ ಯಯಾತಿ ಮೊದಲಾದ ಪ್ರಸಂಗಗಳು ಜನಪ್ರಿಯವಾಗಿದ್ದವು. ಸುರತ್ಕಲ್ ಮೇಳವೊಂದರಲ್ಲೇ ಅವರು ಸುಮಾರು 25ಕ್ಕೂ ಅಧಿಕ ವರ್ಷಗಳ ಕಾಲ ತಿರುಗಾಟ ನಡೆಸಿದ್ದಾರೆ. ನಾಟಿ, ಭೈರವಿ ರಾಗಗಳಲ್ಲಿ ಹಾಡುವುದರಲ್ಲಿ ಜನಪ್ರಿಯರಾಗಿದ್ದ ಅವರು ಹಾಡುಗಾರಿಕೆಯಲ್ಲಿ ಅಂದೇ ವಿವಿಧ ಪ್ರಯೋಗಗಳನ್ನು ನಡೆಸಿದ್ದರು.
ದೇಶ ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಹರಡಿಸಿದ್ದ ಪದ್ಯಾಣ ಗಣಪತಿ ಭಟ್ ಅವರು ಈಟಿವಿ ವಾಹಿನಿಯ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲೂ ಅತಿಥಿಯಾಗಿ ಭಾಗವಹಿಸಿದ್ದರು. ಕನ್ನಡ, ತುಳು ಯಕ್ಷಗಾನದ ಧ್ವನಿಸುರುಳಿಗಳಲ್ಲಿ ಪದ್ಯಾಣ ಕಂಠ ಜನಪ್ರಿಯವಾಗಿದ್ದವು. ಅವರಿಗೆ ಹಲವು ಪ್ರಶಸ್ತಿ-ಸನ್ಮಾನಗಳು ಸಂದಿವೆ.