ಮಂಗಳೂರು: ನಾಗರಿಕರಾಗಿ ನಾವು ಬಹಳ ಎತ್ತರದ ಸ್ಥಾನದಲ್ಲಿದ್ದೇವೆ. ಆದರೆ ಸಾಂಸ್ಕೃತಿಕವಾಗಿ, ನೈತಿಕವಾಗಿ ಹಾಗೂ ಧಾರ್ಮಿಕವಾಗಿ ತುಂಬಾ ಅಧೋಮಟ್ಟಕ್ಕೆ ಇಳಿದಿದ್ದೇವೆ ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದೇವೆ.
ಪುರಭವನದಲ್ಲಿ ನಡೆದ 'ಮತ್ತೆ ಕಲ್ಯಾಣ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜ್ಞಾನ ಸಾಕಷ್ಟು ಸುಧಾರಣೆಯಾಗಿದೆ. ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸುತ್ತಿದ್ದಾರೆ. ಆದರೆ ಹೀಗೆ ಅಂಕ ಗಳಿಸಿದ ವಿದ್ಯಾರ್ಥಿಗಳು ನಾಳೆ ಸಮಾಜ ಎಂಬ ಜೀವನದಲ್ಲಿ ಬದುಕಲು ವಿಫಲರಾಗುತ್ತಾರೆ. ಹಾಗಿದ್ದರೆ ಅಂಕ ಗಳಿಸಿ ಪ್ರಯೋಜನವೇನು? ಇಂದು ವಿದ್ಯಾರ್ಥಿಗಳಿಗೆ ಬೌದ್ಧಿಕ ಶಿಕ್ಷಣ ದೊರೆಯುತ್ತದೆ. ಆದರೆ ನೈತಿಕ, ಸಾಮಾಜಿಕ, ಸಾಂಸ್ಕೃತಿಕ ಶಿಕ್ಷಣ ದೊರೆಯುತ್ತಿಲ್ಲ ಎಂದು ಹೇಳಿದರು.
'ಮತ್ತೆ ಕಲ್ಯಾಣ' ಅಂದರೆ ಎಲ್ಲರನ್ನೂ ಬಸವ ಕಲ್ಯಾಣಕ್ಕೆ ಕರೆದುಕೊಂಡು ಹೋಗುವುದಲ್ಲ. ಇವತ್ತು ಹೇಗೆ ಸಮಾಜದಲ್ಲಿ ಅನಿಷ್ಟಗಳು ನಮ್ಮನ್ನು ಕಾಡುತ್ತಿವೆಯೋ, ಅಂತಹದೇ ಅನಿಷ್ಟಗಳು 12ನೇ ಶತಮಾನದಲ್ಲಿಯೂ ಇತ್ತು. ಧಾರ್ಮಿಕ ಕಂದಾಚಾರ, ಮೌಢ್ಯ, ಅಜ್ಞಾನ, ಜಾತೀಯತೆ, ಪುರೋಹಿತ ಪರಂಪರೆಯ ಅಟ್ಟಹಾಸ, ಪಟ್ಟಭದ್ರ ಹಿತಾಸಕ್ತಿಗಳ ಕಾಟ ಇಂತಹ ಅನೇಕ ಅವಾಂತರಗಳಿಗೆ ಸರಿಯಾದ ಮದ್ದನ್ನು ಬಸವಾದಿ ಶಿವಶರಣರು ಮಾಡಿದರು ಎಂದರು.