ಮಂಗಳೂರು : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರತೀಕವಾಗಿ ಮಂಗಳೂರು ಸ್ಮಾಟ್ ಸಿಟಿ ವತಿಯಿಂದ 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಎ ಬಿ ಶೆಟ್ಟಿ ವೃತ್ತದ ಬಳಿಯಿಂದ ವಿಂಟೇಜ್ ಕಾರ್ ರ‍್ಯಾಲಿ, ಸೈಕಲ್ ರ‍್ಯಾಲಿ ಹಾಗೂ ವಾಕಾಥಾನ್ ನಡೆಯಿತು.
ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಸ್ವತಃ ವಿಂಟೇಜ್ ಕಾರು ರ‍್ಯಾಲಿಯಲ್ಲಿ ಭಾಗವಹಿಸಿ ಕಾರು ಚಾಲನೆ ಮಾಡಿದರು. ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಕಾರಿನಲ್ಲಿ ಅವರೊಂದಿಗೆ ಕುಳಿತು ಜನರಲ್ಲಿ ದೇಶ ಭಕ್ತಿಯ ಜಾಗೃತಿ ಮೂಡಿಸಿದರು. ಸೈಕಲ್ ರ‍್ಯಾಲಿಯಲ್ಲಿ ಸಣ್ಣ ಮಕ್ಕಳಾದಿಯಾಗಿ ಹಿರಿಯರು ಕೂಡ ಭಾಗವಹಿಸಿದ್ದರು.
ಬಳಿಕ ಮಾತಾನಾಡಿದ ಪ್ರೇಮಾನಂದ ಶೆಟ್ಟಿ, ಪ್ರಧಾನಿ ಮೋದಿಯವರ ಕನಸಿನಂತೆ ಭಾರತದ 75ನೇ ಸ್ವಾತಂತ್ರ್ಯ ಮಹೋತ್ಸವವನ್ನು 75 ವಾರಗಳ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲು ಸೂಚಿಸಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ನೆನಪು ಮಾಡಿಕೊಳ್ಳಬೇಕು.
ದೇಶದ 75 ವರ್ಷಗಳ ಸುದೀರ್ಘ ಇತಿಹಾಸವನ್ನು ಜಗತ್ತಿಗೆ ಸಾರಬೇಕು. ಜೊತೆಗೆ ಮುಂದಿನ 25 ವರ್ಷಗಳಲ್ಲಿ ಈ ದೇಶವನ್ನು ಪ್ರಗತಿಯತ್ತ ಸಾಗಿಸಬೇಕೆಂಬ ಸಂಕಲ್ಪ ಕೈಗೊಳ್ಳಲಾಗಿದೆ. ಆದ್ದರಿಂದ ಇಂದು 'ಆಜಾದಿ ಕಾ ಅಮೃತ್ ಮಹೋತ್ಸವ' ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಂಟೇಜ್ ಕಾರ್ ರ‍್ಯಾಲಿ, ಸೈಕಲ್ ರ‍್ಯಾಲಿ, ವಾಕಾಥಾನ್ ಮುಂತಾದ ಕಾರ್ಯಕ್ರಮ ನಡೆಯಿತು. ಕೋವಿಡ್ ಮಾರ್ಗಸೂಚಿಯಂತೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಉತ್ತಮವಾದ ಜನಸ್ಪಂದನೆ ದೊರಕಿದೆ ಎಂದರು.
ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಜನರಲ್ಲಿ ಸ್ವಾತಂತ್ರ್ಯದ ಜಾಗೃತಿ ಮೂಡಿಸಲು, ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗಳನ್ನು ಮಾಡಿರುವ ಉದ್ದೇಶದಿಂದ 'ಆಜಾದಿ ಕಾ ಅಮೃತ್ ಮಹೋತ್ಸವ' ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.