ಮಂಗಳೂರು: ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ದುಬೈ ಮತ್ತು ಕುವೈತ್‌ನ ಅನಿವಾಸಿ ಕನ್ನಡಿಗರನ್ನು ಹೊತ್ತು ತಂದಿರುವ ಮೂರು ವಿಮಾನಗಳು ಶನಿವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದವು.
ಈ ವಿಮಾನಗಳಲ್ಲಿ ಒಟ್ಟು 423 ಪ್ರಯಾಣಿಕರು ಆಗಮಿಸಿದ್ದು, ಅವರೆಲ್ಲನ್ನು ಏಳು ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ದುಬೈನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ 90 ಪ್ರಯಾಣಿಕರು ರಾತ್ರಿ 10 ಗಂಟೆಯ ವೇಳೆಗೆ ಬಂದಿದ್ದರು. ದುಬೈನಿಂದ ಹೊರಟ ಚಾರಿಟಿ ವಿಮಾನವೊಂದು 168 ಅನಿವಾಸಿ ಕನ್ನಡಿಗರನ್ನು ಕರೆತಂದಿದೆ. ಇನ್ನೊಂದು ವಿಮಾನದಲ್ಲಿ ಕುವೈತ್‌ನಿಂದ 165 ಪ್ರಯಾಣಿಕರು ತಾಯ್ನಾಡು ತಲುಪಿದ್ದಾರೆ.
ವಂದೇ ಭಾರತ್ ಮಿಷನ್‌ನ ವಿಮಾನದಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಗೋವಾದಲ್ಲಿ ಇಳಿದಿದ್ದು, ಅಲ್ಲಿಂದ ಅದು ಮಂಗಳೂರಿಗೆ ವಿಮಾನ ಆಗಮಿಸಿದೆ. ಕುವೈತ್‌ನ ಕೇರಳ ಮುಸ್ಲಿಂ ಅಸೋಸಿಯೇಷನ್‌ನ ಕರ್ನಾಟಕ ಶಾಖೆಯು ಮಂಗಳೂರಿಗೆ ಚಾರಿಟಿ ವಿಮಾನವನ್ನು ವ್ಯವಸ್ಥೆಗೊಳಿಸಿದ್ದು, ಜೂ. 27ರಂದು ಮಂಗಳೂರಿಗೆ ಆಗಮಿಸಬೇಕಾಗಿತ್ತು. ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣದಿಂದ ರದ್ದುಗೊಂಡಿತ್ತು. ಇದರಿಂದಾಗಿ 165 ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ನಂತರ ವಿಮಾನಯಾನದ ಪ್ರಯಾಣ ಜು.7ಕ್ಕೆ ಮುಂದೂಡಲಾಗಿತ್ತು.
ಅನೀರಿಕ್ಷಿತ ಬೆಳವಣಿಗೆಯಲ್ಲಿ ಜೂ.30ರಂದು ಕುವೈತ್ ಸಮಾಜ ಸೇವಕ ಮೋಹನ್ ದಾಸ್ ಪರಿಶ್ರಮದಿಂದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೀಶ್ ಕಾರ್ಣಿಕ್ ಅವರನ್ನು ಸಂಪರ್ಕಿಸಿದಾಗ ಕೂಡಲೇ ಸ್ಪಂದಿಸಿದ್ದ ಅವರು ಶನಿವಾರಕ್ಕೆ ಚಾರಿಟಿ ವಿಮಾನಯಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಕುವೈತ್‌ನಿಂದ ಆಗಮಿಸಿರುವ ಈ ವಿಮಾನದಲ್ಲಿ ಕುವೈತ್ ವೀಸಾ ನಿಯಮ ಉಲ್ಲಂಘನೆಯವರಾಗಿರುವ ಏಳು ಮಂದಿ ಕುವೈತ್ ಸರ್ಕಾರದ ಕ್ಷಮಾದಾನಕ್ಕೊಳಗಾಗಿ ಬಂದಿದ್ದರು. ಮಹಿಳಾ ಖೈದಿ ಮತ್ತು ಅವರ ಸಣ್ಣ ಮಗು ಕೂಡ ಇದ್ದರು. ಅವರಿಗೆ ಅಸೋಸಿಯೇಷನ್‌ನಿಂದ ಧನಸಹಾಯ ನೀಡಿ ವಿಮಾನದಲ್ಲಿ ಕಳುಹಿಸಿಕೊಡಲಾಗಿದೆ.
ಕುವೈತ್‌ನಿಂದ ಚಾರಿಟಿ ವಿಮಾನಕ್ಕೆ ಅನುಮತಿ ಸಿಕ್ಕಿದರೂ ರಾಜ್ಯ ಸರ್ಕಾರದ ಹೊಸ ನಿಯಮದಂತೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್-19 ಟೆಸ್ಟ್ ಮಾಡಿ ನೆಗಟಿವ್ ಇದ್ದವರು ಮಾತ್ರ ಪ್ರಯಾಣಿಸಬೇಕಿತ್ತು. ಆದ್ದರಿಂದ ಕುವೈತ್‌ನಲ್ಲಿ ರ್ಯಾಪಿಡ್ ಟೆಸ್ಟ್ ಇಲ್ಲದ ಕಾರಣ ವಿಮಾನಯಾನ ಮುಂದೂಡುವ ಆತಂಕ ಎದುರಾಗಿತ್ತು. ಈ ಬಗ್ಗೆ ಮತ್ತೆ ಶೋಭಾ ಕರಂದ್ಲಾಜೆ ಹಾಗೂ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರನ್ನು ಸಂಪರ್ಕಿಸಿದ್ದು, ಕೊರೊನಾ ಟೆಸ್ಟ್ ಇಲ್ಲದೆ ವಿಮಾನಯಾನಕ್ಕೆ ಬೇಕಾದ ಅನುಮತಿ ನೀಡಿದ್ದಾರೆ. ಎಲ್ಲ ಪ್ರಯಾಣಿಕರಿಗೆ ಕೆಕೆಎಂಎ ವತಿಯಿಂದ ಸುರಕ್ಷಿತ ಕಿಟ್ ಮತ್ತು ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.