ಮಂಗಳೂರು : ಬಿಜೆಪಿಯವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ತಿರುಚಿ ಅಪಪ್ರಚಾರ ಮಾಡುವುದೇ ಕೆಲಸವಾಗಿದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು ಟಿ ಖಾದರ್ ಹೇಳಿದರು. ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಎಲ್ಲಾ ಧಾರ್ಮಿಕ ಮುಖಂಡರು, ಸ್ವಾಮೀಜಿಗಳಿಗೆ ಗೌರವ ನೀಡುತ್ತಾರೆ. ಯಾರ ಬೇಡಿಕೆಗಳಿಗೂ ಇಲ್ಲ ಎಂದಿಲ್ಲ. ಎಲ್ಲಾ ಹಿರಿಯ ಸ್ವಾಮೀಜಿಗಳೊಂದಿಗೆ ಸಿದ್ದರಾಮಯ್ಯ ಬಹಳ ಆತ್ಮೀಯತೆಯಿಂದ ಇದ್ದಾರೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುವಾಗ ಯಾವುದೇ ಒಬ್ಬ ಸ್ವಾಮೀಜಿ ಪ್ರತಿಭಟನೆ ಮಾಡಿರಲಿಲ್ಲ. ಮೂಢನಂಬಿಕೆಗಳ ವಿರುದ್ಧದ ಬಿಲ್ ತರುವ ಸಂದರ್ಭದಲ್ಲಿ ಸ್ವಾಮೀಜಿಗಳ ವಿನಂತಿ ಮಾಡಿದ್ದರೆಂದು ಅದನ್ನು ಸಿದ್ದರಾಮಯ್ಯ ಕೈಬಿಟ್ಟರು. ಆ ಬಳಿಕ ಬಂದ ಇದೇ ಬಿಜೆಪಿ ಸರ್ಕಾರ ಆ ಮೂಢನಂಬಿಕೆ ಬಿಲ್ ಅನ್ನು ಪಾಸ್ ಮಾಡಿತು. ಆಗ ಬಿಜೆಪಿಯಿಂದ ಸ್ವಾಮೀಜಿಗಳಿಗೆ ಅವಮಾನ ಆಗಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತವಿರುವ ಸರ್ಕಾರದಲ್ಲಿ ಸ್ವಾಮೀಜಿಗಳು ಧರಣಿ, ಪ್ರತಿಭಟನೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ತಿಂಗಳಿನಿಂದ ಸ್ವಾಮೀಜಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವಾರು ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಪಾದಯಾತ್ರೆ ಮಾಡುತ್ತಿದ್ದಾರೆ. ಜನರ ಭಾವನೆಗಳಿಗೋಸ್ಕರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೂ, ಬಿಜೆಪಿಯವರು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಸ್ವಾಮೀಜಿಗಳ ಬೇಡಿಕೆಗಳಿಗೂ ಗೌರವ ಕೊಡುವುದಿಲ್ಲ.
ಸಿದ್ದರಾಮಯ್ಯ ಸರ್ಕಾರದ ಕಾಲಘಟ್ಟದಲ್ಲಿ ಎಲ್ಲಾ ದೇವಸ್ಥಾನಗಳ ಅರ್ಚಕರಿಗೆ ಅತ್ಯಧಿಕ ವೇತನ ನಿಗದಿ ಮಾಡಲಾಯಿತು. ದೇವಸ್ಥಾನಗಳ ನಿರ್ವಹಣೆಗೆಂದು ಕೊಡುವ ತಸ್ತೀಕು ದುಡ್ಡನ್ನು 40 ಸಾವಿರ ರೂ.ವರೆಗೆ ಏರಿಕೆ ಮಾಡಿದ್ದು, ಬೇರೆ ಬೇರೆ ಧಾರ್ಮಿಕ ಕ್ಷೇತ್ರಗಳಿಗೆ ಕೋಟ್ಯಂತರ ರೂ. ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಆದರೆ, ಬಿಜೆಪಿ ಸರ್ಕಾರ ಬಂದ ಬಳಿಕ ಒಂದು ನಯಾಪೈಸೆಯನ್ನೂ ಹೆಚ್ಚು ಮಾಡಿಲ್ಲ ಎಂದರು.
ಜನರನ್ನು ದಿಕ್ಕು ತಪ್ಪಿಸುವ ತಂತ್ರ : ಸಿದ್ದರಾಮಯ್ಯರ ಹೇಳಿಕೆಗಳನ್ನು ತಿರುಚಿ ಹೇಳುವ ಮೂಲಕ ಜನರ ಮಧ್ಯೆ ಗೊಂದಲ ಸೃಷ್ಟಿಸುವುದೇ ಬಿಜೆಪಿಯವರ ಕೆಲಸ. ಜನರ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿಯವರು ಮಾಡುವುದಿಲ್ಲ. ತೈಲ ಬೆಲೆ, ಗ್ಯಾಸ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದನ್ನೆಲ್ಲಾ ಜನರ ಮನಸ್ಸಿನಿಂದ ದೂರ ಮಾಡಲು ಈ ರೀತಿಯ ವಿಚಾರಗಳನ್ನು ತಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಯು.ಟಿ.ಖಾದರ್ ದೂರಿದರು.
ಹಿಜಾಬ್ ವಿಚಾರ ಬದಿಗಿರಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿ : ವಿದ್ಯಾರ್ಥಿಗಳು ಹಿಜಾಬ್ ಕುರಿತು ಯಾವುದೇ ರೀತಿಯಲ್ಲಿ ಆಲೋಚನೆ ಮಾಡದೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲಿ. ಸರ್ಕಾರಿ ಶಾಲೆಗಳಲ್ಲಿ ಯಾವ ರೀತಿಯ ಆದೇಶ ಮಾಡಲಾಗಿದೆಯೋ ಅದನ್ನು ಗೌರವಿಸಿ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿ ಎಂದರು.
ಇನ್ನು ಖಾಸಗಿ ಶಾಲೆಗಳಲ್ಲಿ ಅಲ್ಲಿನ ಆಡಳಿತ ಮಂಡಳಿಯ ವಿವೇಚನೆಗೆ ಈ ವಿಚಾರವನ್ನು ಬಿಡಲಾಗಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಯಾವುದೇ ಮಾನಸಿಕ ಒತ್ತಡಕ್ಕೆ ಸಿಲುಕದೆ ನೆಮ್ಮದಿಯಿಂದ ಪರೀಕ್ಷೆ ಬರೆಯಲು ಪೂರಕ ವಾತಾವರಣ ನಿರ್ಮಾಣ ಮಾಡಬೇಕೆಂದು ಖಾಸಗಿ ಶಾಲೆಗಳಲ್ಲಿ ಮನವಿ ಮಾಡುತ್ತೇನೆ. ಹೆತ್ತವರು ವಿದ್ಯಾರ್ಥಿಗಳ ಭವಿಷ್ಯವನ್ನು ಆಲೋಚನೆ ಮಾಡಿ ಪರೀಕ್ಷೆ ಬರೆಯಲು ಪ್ರೋತ್ಸಾಹ ಕೊಡಬೇಕು ಎಂದು ಖಾದರ್ ಮನವಿ ಮಾಡಿದರು.
ಹಿಜಾಬ್ ಕುರಿತು ಹೈಕೋರ್ಟ್ ತೀರ್ಪಿನ ಅನ್ವಯ ಸರ್ಕಾರ ಆದೇಶ ಮಾಡಿದೆ. ಆದ್ದರಿಂದ ಯಾವುದೇ ವಿದ್ಯಾರ್ಥಿಗಳು ಕಾನೂನು ಹಾಗೂ ಸರ್ಕಾರದ ಜತೆಯಲ್ಲಿ ಸಂಘರ್ಷಕ್ಕೆ ಇಳಿಯಬಾರದು. ಹಿಜಾಬ್ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಅಲ್ಲಿ ನ್ಯಾಯ ದೊರೆಯಬಹುದೆಂಬ ನಂಬಿಕೆಯಿದೆ ಎಂದು ಖಾದರ್ ಹೇಳಿದರು.
ಇದನ್ನೂ ಓದಿ: ಸಿಎಂ ಆಗಿದ್ದ ಸಿದ್ದರಾಮಯ್ಯ ಅರಿತು ಹೇಳಿಕೆ ಕೊಡಬೇಕಿತ್ತು: ಸಚಿವ ಭೈರತಿ ಬಸವರಾಜ್