ಮಂಗಳೂರು: ನಗರದ ಹೊಂಡ ಗುಂಡಿಗಳ ರಸ್ತೆಯನ್ನು ಟ್ರಾಫಿಕ್ ಪೊಲೀಸರೊಬ್ಬರು ಮಣ್ಣು ಹಾಕಿ ಮುಚ್ಚುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಘಟನೆ ಇಂದು ನಡೆದಿದೆ.
ಮಂಗಳೂರು ನಗರದ ಕದ್ರಿ ಸಂಚಾರಿ ಠಾಣಾ ಪೊಲೀಸ್ ಪೇದೆ ಪುಟ್ಟರಾಮ ಅವರು ಒಂದು ಲೋಡು ಮಣ್ಣನ್ನು ನಗರದ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿಯ ರಸ್ತೆ ಹೊಂಡಗಳಿಗೆ ಹಾಕಿ ತಾನೇ ಹಾರೆ ಹಿಡಿದು ಮುಚ್ಚಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು ಎಲ್ಲರೂ ಟ್ರಾಫಿಕ್ ಪೊಲೀಸಪ್ಪನ ಈ ಕಾರ್ಯವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದರೂ ರಸ್ತೆಗಳು ಮಾತ್ರ ಹದಗೆಟ್ಟಿದ್ದು ನಿತ್ಯ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದರು. ದಿನನಿತ್ಯ ಈ ನರಕ ಸದೃಶ ದೃಶ್ಯವನ್ನು ನೋಡುತ್ತಿದ್ದ ಅವರು ರಸ್ತೆಗೆ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚಿದ್ದಾರೆ. ಪುಟ್ಟರಾಮರ ಈ ಕಾರ್ಯಕ್ಕೆ ಜನರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಕೂಡಾ ಮೆಚ್ಚಿ ಸನ್ಮಾನ ಮಾಡುವುದಾಗಿ ಹೇಳಿದ್ದಾರೆ.