ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ವರಲ್ಲಿ ಕೋವಿಡ್-19 ದೃಢಪಟ್ಟಿದ್ದು, ಎರಡು ವರ್ಷದ ಮಗು ಸೇರಿದಂತೆ ಮೂವರು ಗುಣಮುಖರಾಗಿದ್ದಾರೆ.
ಜೂನ್ 1ರಂದು ದುಬೈನಿಂದ ಆಗಮಿಸಿದ್ದ 28 ವರ್ಷದ ಯುವತಿ, ಮೇ 13ರಂದು ಮುಂಬೈನಿಂದ ಆಗಮಿಸಿದ್ದ 48 ವರ್ಷ, 50 ವರ್ಷ, 34 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ. ಇವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಗುಣಮುಖರಾಗಿದ್ದಾರೆ. ಎರಡು ವರ್ಷದ ಮಗು, 61 ಮತ್ತು 42 ವರ್ಷದ ಪುರುಷರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 143 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 76 ಮಂದಿ ಗುಣಮುಖರಾಗಿದ್ದಾರೆ. ಏಳು ಮಂದಿ ಸಾವನ್ನಪ್ಪಿದ್ದು, 60 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 125 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 150 ಮಂದಿಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.