ಬಂಟ್ವಾಳ: ಎಸ್ವಿಎಸ್ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ಈ ಬಾಲಕನ ಹೆಸರು ಕೌಶಿಕ್. ತಂದೆ ರಾಜೇಶ್ ಆಚಾರ್ಯ, ತಾಯಿ ಜಲಜಾಕ್ಷಿ ಆಚಾರ್ಯ.
ಬಂಟ್ವಾಳ ಬಸ್ತಿಪಡ್ಪುವಿನ ಕಂಚಿಗಾರಪೇಟೆಯ ಕೌಶಿಕ್, ಹುಟ್ಟುವಾಗಲೇ ಕೈ ಕಳೆದುಕೊಂಡಿದ್ದ. ಈತನ ಕೆಲಸಗಳೆಲ್ಲವೂ ಕಾಲಿನಿಂದಲೇ ಆಗಬೇಕು. ಅವನು ಸೈಕಲ್ನಲ್ಲೇ ಶಾಲೆಗೆ ಹೋಗುತ್ತಿದ್ದ.
ವಿಶೇಷ ಚೇತನ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಮತ್ತೊಬ್ಬರ ಸಹಾಯವನ್ನು ಪಡೆಯಬಹುದು. ಆದರೆ, ಕೌಶಿಕ್ ಹಾಗೆ ಮಾಡಲಿಲ್ಲ. ಎಲ್ಲವನ್ನೂ ನಿರಾಕರಿಸಿದ. ನಿನ್ನೆ ಪರೀಕ್ಷೆಯನ್ನು ನಿಗದಿತ ಸಮಯದೊಳಗೆ ಸುಲಲಿತವಾಗಿ ಬರೆದ. ಅದು ಕಾಲಿನ ಬೆರಳುಗಳ ಮೂಲಕವೇ.
ವಿಕಲತೆ ಇದೆ ಎಂಬ ಚಿಂತೆಯಿಂದ ಕೊರಗದೇ ಮನೆಯವರೂ ಬಾಲಕನ ಚಟುವಟಿಕೆಗಳಿಗೆ ತುಂಬು ಮನಸ್ಸಿನಿಂದ ಪ್ರೋತ್ಸಾಹ ನೀಡುತ್ತಿದ್ದಾರೆ. ಕಾಲಿನ ಸಹಾಯದಲ್ಲೇ ಮಣ್ಣಿನ ಕಲಾಕೃತಿ ರಚನೆ, ನೃತ್ಯ ಮಾಡುವುದು, ಸೈಕಲ್ ಸವಾರಿ, ಈಜು ಈತನ ಆಸಕ್ತಿಯ ವಿಷಯಗಳು.
ಸಣ್ಣ ಸಣ್ಣ ವಿಷಯಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳಿರುವ ಈ ದಿನಗಳಲ್ಲಿ ಕೌಶಿಕ್ ಮಾತ್ರ ಅಂತಹವರಿಗೆಲ್ಲ ಮಾದರಿಯಾಗಿದ್ದಾನೆ. ಬಡತನವಿದ್ದರೂ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದಲೇ ಬರೆಯುವ ಮೂಲಕ ಉತ್ತಮ ಭವಿಷ್ಯದ ಕನಸು ಕಾಣುತ್ತಿದ್ದಾನೆ. ಅಣ್ಣ ಕಾರ್ತಿಕ್, ತಮ್ಮ ಮೋಕ್ಷಿತ್ ಈತನಿಗೆ ಪೂರ್ಣ ನೆರವಾಗುತ್ತಾರೆ.