ಮಂಗಳೂರು: ಇತ್ತೀಚೆಗೆ ಮೃತಪಟ್ಟಿದ್ದ ತಮ್ಮ ತಾತನ ಪಿಂಡ ಪ್ರದಾನ ಮಾಡಲು ಬಂದಾಗ ಮತ್ತೊಂದು ದುರಂತ ನಡೆದಿದೆ. ಕುಟುಂಬದೊಂದಿಗೆ ಎನ್ಐಟಿಕೆ ಸಮುದ್ರ ತೀರಕ್ಕೆ ಬಂದಿದ್ದ ಸಹೋದರಿಯರಿಬ್ಬರು ನೀರು ಪಾಲಾಗಿದ್ದಾರೆ. ಮಂಗಳೂರು ಶಕ್ತಿನಗರ ನಿವಾಸಿಗಳಾದ ತೃಷಾ(17), ವೈಷ್ಣವಿ(21) ಸಮುದ್ರಪಾಲಾದ ಯುವತಿಯರು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಮೃತಪಟ್ಟ ತಮ್ಮ ತಾತನ ತಿಥಿಯ ನಿಮಿತ್ತ ಪಿಂಡ ಪ್ರದಾನ ಮಾಡಲೆಂದು ತಮ್ಮ ಕುಟುಂಬ ವರ್ಗದವರೊಂದಿಗೆ ಈ ಸೋದರ ಸಂಬಂಧಿ ಸಹೋದರಿಯರು ಎನ್ಐಟಿಕೆ ಬಳಿಯಿರುವ ಸಮುದ್ರ ತೀರಕ್ಕೆ ಇಂದು ಬೆಳಗ್ಗೆ ಆಗಮಿಸಿದ್ದರು. ಈ ವೇಳೆ ವೆಂಕಟೇಶ್ ಎಂಬವರು ವೈಷ್ಣವಿ ಹಾಗೂ ತ್ರಿಷಾರೊಂದಿಗೆ ಬೀಚ್ನಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರೂ ಕೊಚ್ಚಿ ಹೋಗಿದ್ದರು.
ತಕ್ಷಣ ಸ್ಥಳೀಯ ಈಜುಗಾರರು ಹಾಗೂ ಸುರತ್ಕಲ್ ಪೊಲೀಸ್ ಠಾಣೆಯ ಹೋಮ್ ಗಾರ್ಡ್ ಪ್ರಶಾಂತ್ ಮೂವರನ್ನು ಸಮುದ್ರದಿಂದ ಮೇಲಕ್ಕೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವೈಷ್ಣವಿ ಹಾಗೂ ತ್ರಿಷಾ ಮೃತಪಟ್ಟಿದ್ದಾರೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ನಡುರಸ್ತೆಯಲ್ಲೇ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಕೊಂದ ಮಗ!