ಮಂಗಳೂರು: ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿರುವ ಸತೀಶ ಅಲಿಯಾಸ್ ಶಶಿ ಎಂಬಾತನ ಮೇಲಿನ ಆರೋಪ ಸಾಬೀತಾಗಿದ್ದು, ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಆರೋಪಿ ಸತೀಶ ಅಲಿಯಾಸ್ ಶಶಿಗೆ ಐಪಿಸಿ ಸೆಕ್ಷನ್ 376ರ ಅನ್ವಯ 7ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಆರು ತಿಂಗಳು ಸಾದಾ ಶಿಕ್ಷೆ ಅನುಭವಿಸಬೇಕು. ಪೋಕ್ಸೋ ಕಾಯ್ದೆಯ ಸೆಕ್ಷನ್ 6ರ ಅನ್ವಯ 10 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ, ಡಂಡ ತೆರಲು ತಪ್ಪಿದ್ದಲ್ಲಿ 8 ತಿಂಗಳ ಸಾದಾ ಶಿಕ್ಷೆ ವಿಧಿಸಿ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವೆಂಕಟರಮಣ ಭಟ್ ತೀರ್ಪು ನೀಡಿದ್ದಾರೆ.
ದಂಡದ ಮೊತ್ತದಲ್ಲಿ 50 ಸಾವಿರ ರೂ. ಸಂತ್ರಸ್ತೆಗೆ ಪಾವತಿಸಬೇಕು. ಅಲ್ಲದೆ ಸಂತ್ರಸ್ತೆಗೆ ಸರ್ಕಾರದಿಂದ 6 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಪ್ರಕರಣದ ವಿವರ: ಆರೋಪಿ ಬೆಳ್ತಂಗಡಿ ತಾಲೂಕಿನ ಗ್ರಾಮವೊಂದರ ನಿವಾಸಿ ಸತೀಶ ಅಲಿಯಾಸ್ ಶಶಿ ಸಂತ್ರಸ್ತೆ ಮಾವನ ಜೊತೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಈ ಅಪ್ರಾಪ್ತೆಯ ಜೊತೆ ಸ್ನೇಹ ಬೆಳೆಸಿದ್ದ. 2018ರ ಜನವರಿ ಕೊನೆಯ ವಾರದಲ್ಲಿ ಆರೋಪಿ ಸಂತ್ರಸ್ತೆಯನ್ನು ಮನೆಯ ಪಕ್ಕದಲ್ಲಿರುವ ಗುಡ್ಡಕ್ಕೆ ಬರಲು ತಿಳಿಸಿದ್ದಾನೆ. ಅಲ್ಲಿಗೆ ಬಂದಾಗ ಬಾಲಕಿ ಬಳಿ ಆರೋಪಿಯು ಅಸಭ್ಯವಾಗಿ ವರ್ತಿಸಿ ಅತ್ಯಾಚಾರವೆಸಗಿದ್ದಾನೆ. ಬಳಿಕವೂ ಸಾಕಷ್ಟು ಬಾರಿ ಇದೇ ರೀತಿ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭವತಿಯಾಗಿದ್ದಳು.
2018 ಆಗಸ್ಟ್ 3ರಂದು ಬಾಲಕಿಯ ತಾಯಿ ಮೃತಪಟ್ಟಿದ್ದು, ಅಂದು ಮನೆಗೆ ಬಂದ ಬಾಲಕಿಯ ಮಾವ ಆಕೆಯ ಹೊಟ್ಟೆ ಗಮನಿಸಿ ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಬಾಲಕಿಯ ಮಾವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ವೃತ್ತ ನಿರೀಕ್ಷಕರು ಈ ಪ್ರಕರಣವನ್ನು ತನಿಖೆ ಮಾಡಿ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವನ್ನು ಕೈಗೆತ್ತಿಕೊಂಡ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ಪೋಕ್ಸೋ ನ್ಯಾಯಾಲಯ 14 ಜನ ಸಾಕ್ಷಿದಾರರನ್ನು ವಿಚಾರಣೆ ನಡೆಸಿ, 18 ದಾಖಲೆಗಳನ್ನು ಗುರುತಿಸಿದೆ. ತನಿಖಾ ಕಾಲದಲ್ಲಿ ಬಾಲಕಿಗೆ ಹೆರಿಗೆಯಾಗಿದ್ದು, ಈ ಹಿನ್ನೆಲೆ ಆರೋಪಿ ಹಾಗೂ ಮಗುವಿನ ರಕ್ತದ ಮಾದರಿಯನ್ನು ಬೆಂಗಳೂರಿನ ಎಸ್ಎಸ್ಎಲ್ ಕಚೇರಿಗೆ ಕಳುಹಿಸಿತ್ತು. ಎನ್ಡಿಎ ವರದಿಯಲ್ಲಿ ಮಗುವಿನ ತಂದೆ ಆರೋಪಿಯೇ ಎಂದು ದೃಢಪಟ್ಟಿತ್ತು.
ಬಾಲಕಿ ಮೇಲಿನ ಅತ್ಯಾಚಾರ ಆರೋಪ ಡಿಸೆಂಬರ್ 1ರಂದು ಸಾಬೀತಾಗಿದೆ. ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಸಿ.ವೆಂಕಟರಮಣ ವಾದಿಸಿದ್ದಾರೆ.