ಸುಳ್ಯ : ನಿಮಗೆ ಕಸ ಸಾಗಾಟಕ್ಕೆ 10 ಲಾರಿಗಳು ಯಾವಾಗ ಬೇಕು ಅಂತಾ ಹೇಳಿ. ನಿಮಗೆ 10 ಲಾರಿ ನಾನೇ ಕಳಿಸಿಕೊಡುತ್ತೇನೆ. ನನ್ನಿಂದ ಆಯ್ತು ಅನ್ನುವುದು ನನಗೆ ಬೇಕಾಗಿಲ್ಲ. ನಮ್ಮಿಂದ ಆಯ್ತು ಎನ್ನುವುದು ನನಗೆ ಬೇಕು. ಇವತ್ತು ಈ ಸ್ವಚ್ಛತೆ ವಿಷಯದಲ್ಲಿ ಮಾಧ್ಯಮದವರು ಸೇರಿರೋದರಿಂದ ಇದಕ್ಕೆ ಪರಿಹಾರ ಸಿಕ್ಕಬಹುದು ಎಂಬ ಭರವಸೆ ಇದೆ. ಎಲ್ಲಾ ಮಾಧ್ಯಮದವರಿಗೆ ಧನ್ಯವಾದಗಳು ಎಂದು ಫೇಸ್ಬುಕ್ನಲ್ಲಿ ನಟ, ನಿರ್ದೇಶಕ, ಗಾಯಕ ಅನಿರುದ್ದ್ ವಿಡಿಯೋ ಹಂಚಿಕೊಂಡಿದ್ದಾರೆ.
ಸುಳ್ಯ ನಗರ ಪಂಚಾಯತ್ ಎದುರು ಶೆಡ್ನಲ್ಲಿ ತುಂಬಿಸಲಾಗಿರುವ ಕಸದ ಫೋಟೋವನ್ನ ಚಿತ್ರನಟ ಅನಿರುದ್ದ್ ಅವರಿಗೆ ತಲುಪಿ, ಅವರು ಕಸ ತೆರವಿಗೆ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿ, ಈ ವಿಡಿಯೋ ಶೇರ್ ಮಾಡಿದ ಸುಪ್ರೀತ್ ಎಂಬುವರನ್ನು ಬಿಜೆಪಿ ಮೀಡಿಯಾ ವಾಟ್ಸ್ಆ್ಯಪ್ ಗ್ರೂಪ್ನಿಂದ ರಿಮೂವ್ ಮಾಡಿದ ವಿಚಾರವು ಮಾಧ್ಯಮದಲ್ಲಿ ಪ್ರಚಾರ ಪಡೆದಿತ್ತು.
ನಂತರದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ನಗರ ಪಂಚಾಯತ್ನ ಕಸ ತೆರವಿಗೆ ಮುಂದಾಗದೆ ನಟ ಅನಿರುದ್ಧ ಹೇಳಿಕೆಗೆ ವಾಟ್ಸ್ಆ್ಯಪ್ನಲ್ಲಿ ನಟ ಅನಿರುದ್ದ್ಗೆ 10 ಲಾರಿ ಕಳಿಸಿ ಕೊಡಲು ಹೇಳಿ. ಲೋಡಿಂಗ್ ನಮ್ಮ ಕಾರ್ಮಿಕರಿಂದ ಮಾಡಿಸುತ್ತೇವೆ ಎಂದು ಕಾಮೆಂಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅನಿರುದ್ದ್, ಫೇಸ್ಬುಕ್ನಲ್ಲಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ತಮಗೆ ಬಹುಶಃ ಗೊತ್ತಿಲ್ಲ ಅಂತಾ ಕಾಣುತ್ತೆ, ನಾನು ಕಳೆದ ಒಂದೂವರೆ ವರ್ಷದಿಂದ ಸ್ವಚ್ಛತಾ ಅಭಿಯಾನದಲ್ಲಿ ಸಹಭಾಗಿಯಾಗಿದ್ದೇನೆ. ಸ್ವಚ್ಛತೆಗಾಗಿ ಸಾಕಷ್ಟು ಪೋಸ್ಟ್‌ಗಳನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಸ್ಥಳೀಯರಿಂದ ಮತ್ತು ಅಧಿಕಾರಿಗಳಿಂದ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಎಂದಿದ್ದಾರೆ.
ನಿಮಗೆ ಕಸ ಸಾಗಾಟಕ್ಕೆ 10ಲಾರಿಗಳು ಯಾವಾಗ ಬೇಕು ಅಂತಾ ಹೇಳಿ. ನಾನೇ 10 ಲಾರಿಗಳನ್ನು ಕಳುಹಿಸುತ್ತೇನೆ. ಇಲ್ಲಿ ಸಮಸ್ಯೆ ಇದ್ದರೆ ಅದನ್ನು ನಾವು ಎತ್ತಿ ತೋರಿಸಲೇ ಬೇಕು ಮತ್ತು ಧ್ವನಿ ಎತ್ತಲೇಬೇಕು. ಇಲ್ಲಿ ಯಾರನ್ನೂ ದೂಷಿಸುವ ಅಗತ್ಯ ಇಲ್ಲ. ಪ್ರೀತಿಯಿಂದ ಕೈಜೋಡಿಸಿ ಈ ಸಮಸ್ಯೆಯನ್ನು ಬಗೆಹರಿಸಿ. ನಮ್ಮ ಬಡಾವಣೆ, ನಮ್ಮ ನಗರ ನಮ್ಮ ದೇಶ, ಬೇರೆ ದೇಶಗಳಿಗೆ ನಾವೇ ಮಾದರಿಯಾಗಬೇಕು, ಆ ನಿಟ್ಟಿನಲ್ಲಿ ನಾವೆಲ್ಲರೂ ಸೇರಬೇಕು ಎಂದು ಅನಿರುದ್ದ್ ಅವರು ತನ್ನ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: 12 ಗಂಟೆಗಳ ಕಾಲ ಊರಿಗೆ ಊರೇ ಖಾಲಿ.. ಅರಣ್ಯ ಸೇರುವ ಜನ ಅಲ್ಲಿ ಮಾಡೋದೇನು?