ಮಂಗಳೂರು: ಕೊರೊನಾ ವಿರುದ್ಧ ಗೆಲ್ಲಲು ಪ್ರಧಾನಿಯವರು ವಿವಿಧ ಕಾರ್ಯ ಯೋಜನೆ ಹಾಕಿಕೊಂಡಿದ್ದರೆ, ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕೊರೊನಾ ನಿಯಂತ್ರಣ ಮಾಡಲು ಸರ್ಕಾರದ ಜೊತೆ ಕೈಜೋಡಿಸುವ ಬದಲು ಇಡೀ ದೇಶದಲ್ಲಿ ವಲಸೆ ಕಾರ್ಮಿಕರನ್ನು ಬಿಜೆಪಿ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಹಿಂದೆ ಅಧಿಕಾರಕ್ಕಾಗಿ ದೇಶವನ್ನು ಮತೀಯ ಆಧಾರದಲ್ಲಿ ವಿಭಜನೆ ಮಾಡಿತು. ಜಾತಿಯ ವಿಷ ಬೀಜ ಬಿತ್ತುವ ಕೆಲಸ ಮಾಡಿತು.
ದೇಶದಲ್ಲಿ ಸಿಎಎ ಕಾನೂನು ಜಾರಿಗೊಂಡ ಸಂದರ್ಭ ಮುಸಲ್ಮಾನರನ್ನು ಎತ್ತಿಕಟ್ಟುವ ಕೆಲಸ ಮಾಡಿತು. ದ.ಕ ಜಿಲ್ಲೆಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆ ಎಲ್ಲಾ ಕಡೆಗಳಿಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಸುಳ್ಳು ವದಂತಿಗಳನ್ನು ಹಬ್ಬಿಸಿ ರೈಲು ನಿಲ್ದಾಣ, ಮತ್ತಿತರ ಕಡೆಗಳಲ್ಲಿ ಜನ ಜಮಾಯಿಸುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.
ಎರಡು ತಿಂಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೊರೊನಾ ಸೋಂಕು ಅಂತಹ ದೊಡ್ಡ ರೋಗವಲ್ಲ. ಇದಕ್ಕೆ ಇಷ್ಟೊಂದು ಪ್ರಚಾರ, ಮುಂಜಾಗ್ರತೆ ಬೇಡ ಎಂಬ ಬಾಲಿಶ ಹೇಳಿಕೆ ನೀಡುತ್ತಾರೆ. ಅಲ್ಲದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಕಾರ್ಯಕ್ರಮದಿಂದ ದೇಶದಲ್ಲಿ ಸೋಂಕು ಹರಡಿದೆ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡುತ್ತಾರೆ ಎಂದರು.