ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಕುಂಪಲದ ಚಿತ್ರಾಂಜಲಿ ನಗರದ ದಿವ್ಯಾಂಗ ವಿದ್ಯಾರ್ಥಿ ಅನ್ವಿತ್.ಜಿ ಕುಮಾರ್ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ದೃಷ್ಟಿ ಸಮಸ್ಯೆ ಹೊಂದಿರುವ ಅನ್ವಿತ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೊಲಿಟಿಕಲ್ ಸೈನ್ಸ್ನಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿದ್ದು, ಶೇ.82ರಷ್ಟು ಅಂಕ ಪಡೆದಿದ್ದಾರೆ. ಈ ಮೂಲಕ ವಿಶ್ವವಿದ್ಯಾನಿಲಯದಲ್ಲಿ ಅತ್ಯಧಿಕ ಅಂಕ ಪಡೆದ ಮೊದಲ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ.
6ನೇ ತರಗತಿಯಲ್ಲಿರುವಾಗ ( 12ನೇ ವಯಸ್ಸಿನಲ್ಲಿ) ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡ ಅನ್ವಿತ್‌ಗೆ ತಾಯಿಯೇ ಎರಡು ಕಣ್ಣುಗಳಂತೆ ಕೆಲಸ ಮಾಡಿದ್ದಾರಂತೆ. ಬಾಲ್ಯದಲ್ಲಿಯೇ ವಿದ್ಯೆಗೆ ಪ್ರೋತ್ಸಾಹಿಸುತ್ತಿದ್ದ ತಾಯಿಯ ಕಾರಣದಿಂದಲೇ ಪ್ರತಿ ತರಗತಿಯಲ್ಲಿಯೂ ಅತ್ಯುತ್ತಮ ಅಂಕ ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಎಸ್ಎಸ್ಎಲ್ಸಿವರೆಗೆ ಬ್ರೈಲ್ ಲಿಪಿಯಲ್ಲಿ ಶಿಕ್ಷಣ ಪಡೆದ ಬಳಿಕ ಸಾಮಾನ್ಯರಂತೆ ಶಿಕ್ಷಣ ಪಡೆದಿದ್ದಾರೆ. ಇವರಿಗೆ ಕಲಿಕೆಯಲ್ಲಿ ಸಹಪಾಠಿಗಳು ಸಹ ಸಾಕಷ್ಟು ಸಹಕಾರ ನೀಡಿದ್ದಾರೆ. ಪರೀಕ್ಷೆಯನ್ನು ಸಹಾಯಕರ ನೆರವಿನಲ್ಲಿ ಬರೆದು ಸಾಧನೆ ಮಾಡಿದ್ದಾರೆ. ಎಸ್ಎಸ್ಎಲ್ಸಿಯಲ್ಲಿ 87%, ಪಿಯುಸಿಯಲ್ಲಿ 88.1%, ಬಿಎ ಪದವಿಯಲ್ಲಿ 89% ಪಡೆದ ಅನ್ವಿತ್ ಇದೀಗ ಎಂಎ ಸ್ನಾತಕೋತ್ತರ ಪದವಿಯಲ್ಲಿ 82% ಅಂಕ ಪಡೆದಿದ್ದಾರೆ. ಬಿಎಯಲ್ಲಿಯೂ ಗೋಲ್ಡ್ ಮೆಡಲ್ ಪಡೆದಿರುವ ಅನ್ವಿತ್ ಇದೀಗ ಎಂಎಯಲ್ಲಿಯೂ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದು, ಕಾಲೇಜು ಉಪನ್ಯಾಸಕನಾಗಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಗೋ ಉತ್ಪನ್ನಗಳ ಜೊತೆಗೆ ಉಪ ಉತ್ಪನ್ನಗಳ ತಯಾರಿಕೆಗೆ ರಾಜ್ಯ ಸರ್ಕಾರ ಒತ್ತು