ಮಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವುದು ದೇವಳದ ಆಡಳಿತ ಮಂಡಳಿಗೆ ನುಂಗಲಾರದ ತುತ್ತಾಗಿದೆ. ಆದ್ದರಿಂದ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿ ಅಸಮರ್ಪಕವಾಗಿ ತನಿಖೆ ನಡೆಸಿ ಸೇವೆಯಿಂದ ವಜಾ ಮಾಡಲಾಗಿದೆ ಎಂದು ದೇವಳದ ಮಾಜಿ ಸರ್ಪಸಂಸ್ಕಾರ ಪೂಜೆಯ ಸೇವಾಕರ್ತೃ ಟಿ.ಎಸ್.ಶ್ರೀನಾಥ್ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ತಮ್ಮ ತಪ್ಪನ್ನು ಮರೆಮಾಚಲು ನನ್ನ ಬಗ್ಗೆ ಸುಳ್ಳು ಆಪಾದನೆ ಹೊರಿಸಿ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ದೇಗುಲದಲ್ಲಿ ಕೋಟ್ಯಂತರ ರೂ. ಮೌಲ್ಯದ ಆಭರಣ, ವಿಗ್ರಹಗಳು ನಾಪತ್ತೆಯಾಗಿರುವ ಬಗ್ಗೆ ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಬಳಿಕ ಅಕ್ಟೋಬರ್ 23ರ ಬೆಳಗ್ಗೆ 10.30 ಯಿಂದ 12.30ರ ಮಧ್ಯೆ ಕಳವಾಗಿರುವ ಆ ಸೊತ್ತುಗಳನ್ನು ದೇವಸ್ಥಾನದ ಒಳಗೆ ಇಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಹಾಗಾದರೆ ಇಷ್ಟು ದಿನಗಳ ಕಾಲ ಆ ಮೌಲ್ಯಯುತ ಸೊತ್ತುಗಳು ಎಲ್ಲಿ ಹೋಗಿದ್ದವು. ಯಾರು ಅಲ್ಲಿಗೆ ತಂದು ಇಟ್ಟಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.