ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ಸಂಭವಿಸಿ ಇಂದಿಗೆ 12 ವರ್ಷ ತುಂಬಿದೆ. ಅಗಲಿದವರಿಗೆ ಜಿಲ್ಲಾಡಳಿತದಿಂದ ತಣ್ಣೀರುಬಾವಿಯ ಹುತಾತ್ಮರ ಸ್ಮಾರಕದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಮೊದಲಾದವರು ಪುಷ್ಪ ನಮನ ಸಲ್ಲಿಸಿದರು.
2010ರ ಮೇ 22ರಂದು ಬೆಳಗ್ಗೆ ದುಬೈನಿಂದ ಬಂದ ಏರ್ ಇಂಡಿಯಾ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇಯಲ್ಲಿ ನಿಲ್ಲದೇ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ದುರಂತ ಸಂಭವಿಸಿತ್ತು. ಆ ವೇಳೆ ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅಪಘಾತದಲ್ಲಿ 158 ಮಂದಿ ಸಾವನ್ನಪ್ಪಿದ್ದು, 8 ಮಂದಿ ಬದುಕುಳಿದಿದ್ದರು.
ಸಾವನ್ನಪ್ಪಿದ 158 ಮಂದಿಯಲ್ಲಿ 12 ಮಂದಿಯ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಗುರುತು ಪತ್ತೆಯಾಗದವರ ಮೃತದೇಹವನ್ನು ತಣ್ಣೀರು ಬಾವಿಯ ನದಿತೀರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆ ಬಳಿಕ ಇದೇ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿತ್ತು. ಇಂದು ಜಿಲ್ಲಾಡಳಿತದಿಂದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆರಾಯನ ಅವಾಂತರ : 3,453 ಮನೆಗಳಿಗೆ ಹಾನಿ