ಮಂಗಳೂರು: ಮಂಗಳಾದೇವಿಯ ಮಂಗಳಾಂಬೆಗೆ ಭಾನುವಾರ ರಾತ್ರಿ 60 ಸಾವಿರಕ್ಕೂ ಅಧಿಕ ಮಲ್ಲಿಗೆ ಚೆಂಡಿನಲ್ಲಿ ಶಯನೋತ್ಸವ ಪೂಜೆ ನೆರವೇರಿಸಲಾಯಿತು.
ದೇವಳದ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ದೇವಿಗೆ ಶಯನೋತ್ಸವ ಎಂಬ ವಿಶೇಷ ಪೂಜೆ ನೆರವೇರುತ್ತದೆ. ಜಾತ್ರಾಮಹೋತ್ಸವದ 5ನೇ ದಿನದ ರಥೋತ್ಸವದ ಬಳಿಕ ಗರ್ಭಗುಡಿಯಲ್ಲಿ ಮಂಗಳಾಂಬೆಗೆ ಮಹಾಪೂಜೆ ನೆರವೇರಿ, ಭೂತಬಲಿಯ ನಂತರ ರಾತ್ರಿ 1 ಗಂಟೆಗೆ ದೇವಿಗೆ ಶಯನೋತ್ಸವ ಪೂಜೆ ನೆರವೇರಿಸಲಾಯಿತು.
ಈ ಬಾರಿ ಭಕ್ತರು ದೇವಿ ಪ್ರೀತ್ಯರ್ಥವಾಗಿ ಶಯನೋತ್ಸವಕ್ಕಾಗಿ 60 ಸಾವಿರಕ್ಕೂ ಅಧಿಕ ಮಲ್ಲಿಗೆ ಸಮರ್ಪಿಸಿದ್ದಾರೆ. ಈ ಮಲ್ಲಿಗೆ ಚೆಂಡನ್ನು ದೇವಿಯ ಮೂಲ ಬಿಂಬಕ್ಕೆ ಅಲಂಕಾರ ಮಾಡಿ, ಶಯನೋತ್ಸವಕ್ಕೆ ಅಣಿ ಮಾಡಿ ಕವಾಡ ಬಂಧನ ಮಾಡಲಾಗುತ್ತದೆ. ಘಮಘಮಿಸುವ ಮಲ್ಲಿಗೆಯ ತಲ್ಪದಲ್ಲಿ ದೇವಿ ಸುಖವಾಗಿ ನಿದ್ರೆಗೆ ಜಾರುತ್ತಾಳೆ ಎಂಬ ನಂಬಿಕೆಯಿದೆ.
ಇಂದು ಪ್ರಾತಃಕಾಲ ಮಂಗಳಾಂಬೆಯ ವಿಶೇಷ ಪೂಜೆಯೊಂದಿಗೆ ದೇವಳದ ಗರ್ಭಗುಡಿಯ ಬಾಗಿಲು ತೆರೆದು, ಮಲ್ಲಿಗೆಯನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ಸಮರ್ಪಿಸಲಾಗುತ್ತದೆ.
ಇದನ್ನೂ ಓದಿ: ಶೀಘ್ರದಲ್ಲೇ ಹಂಪಿ ಬೈ ನೈಟ್ ಆರಂಭ : ಐತಿಹಾಸಿಕ ಸ್ಮಾರಕಗಳಿಗೆ ಬೆಳಕಿನ ಚಿತ್ತಾರ