ಮಂಗಳೂರು: ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ತ್ರಿಶೂಲ ದೀಕ್ಷೆ ನೀಡಿರುವ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರು, ನಾವು ಕಾರ್ಯಕರ್ತರಿಗೆ ಬಾಂಬ್, ಗ್ರೆನೇಡ್ ದೀಕ್ಷೆ ನೀಡಿಲ್ಲ. ನಾವು ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸಲು ತ್ರಿಶೂಲ ದೀಕ್ಷೆ ನೀಡಿದ್ದು ಎಂದು ಹೇಳಿದ್ದಾರೆ.
ನಾವು ಶಕ್ತಿಯ ಆರಾಧಕರಾಗಿದ್ದು, ಕಾರ್ಯಕರ್ತರ ಆತ್ಮರಕ್ಷಣೆ ಮತ್ತು ಧರ್ಮರಕ್ಷಣೆಗಾಗಿ ಆಯುಧ ಪೂಜೆಯಂದು ಈ ಕಾರ್ಯಕ್ರಮ ಮಾಡಿದ್ದೇವೆ. ಬಜರಂಗದಳದ ಹೊಸ ಹೊಸ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಪ್ರತಿವರ್ಷ ನಡೆಯುತ್ತದೆ.
ಇದು ಯಾರ ವಿರುದ್ಧವೂ ಅಲ್ಲ. ಯಾರನ್ನಾದರೂ ಕೊಲ್ಲಬೇಕು, ತೊಂದರೆ ಕೊಡಬೇಕೆಂಬ ದುರುದ್ದೇಶದಿಂದ ಇದನ್ನು ಮಾಡಿಲ್ಲ. ಕೇವಲ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಲು ಮಾಡಿದ್ದೇವೆ ಎಂದರು.
ಇದನ್ನೂ ಓದಿ: ತ್ರಿಶೂಲ ವಿತರಣೆ ವಿಚಾರ, ಪರಿಶೀಲನೆ ನಡೆಸಲು ಸೂಚನೆ, ತಪ್ಪಾಗಿದ್ದರೆ ಕ್ರಮ : ಕಮಿಷನರ್ ಶಶಿಕುಮಾರ್
ಇದು ಕಾನೂನು ವಿರುದ್ಧವಾಗಿ ಇಲ್ಲ. ನಾವು ಮಾಡಿರುವ ತ್ರಿಶೂಲ ಹರಿತವಾಗಿಲ್ಲ. ಕೊಲ್ಲಬೇಕು, ಚುಚ್ಚಬೇಕು ಎಂಬ ಉದ್ದೇಶವೂ ಇಲ್ಲ. ಪ್ರತಿ ವರ್ಷ ಹೊಸ ಹೊಸ ಕಾರ್ಯಕರ್ತರಿಗೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಇದೇ ರೀತಿ ಶಸ್ತ್ರ ಪೂಜೆಯನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.