ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಸ್ಇಝಡ್ನ ಮೀನು ಸಂಸ್ಕರಣಾ ಘಟಕದಲ್ಲಿ ಕಾರ್ಮಿಕರನ್ನು ಜೀತದಾಳುಗಳಂತೆ ಯಾವುದೇ ಮುಚ್ಚುಮರೆ ಇಲ್ಲದೆ ಬಹಿರಂಗವಾಗಿ ದುಡಿಸುತ್ತಿರುವುದು ಆಘಾತಕಾರಿ ವಿಚಾರ ಎಂದು ಡಿವೈಎಫ್ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ ಎಂದು ಆರೋಪಿಸಿದ್ದಾರೆ.
ಎಸ್ಇಝಡ್ನ ಒಳಗಡೆ ಹಲವಾರು ಮೀನು ಸಂಸ್ಕರಣಾ ಘಟಕಗಳು ಕಾರ್ಯಾಚರಿಸುತ್ತಿದ್ದು, ಇಲ್ಲಿನ ಎಒಟಿ ಎಂಬ ಮೀನು ಸಂಸ್ಕರಣಾ ಘಟಕದಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಇವರಲ್ಲಿ ಬಹುತೇಕರು ಅಸ್ಸಾಂ ರಾಜ್ಯದವರಾಗಿದ್ದು, ಉತ್ತರ ಭಾರತ ಮೂಲದ, ಕಾರ್ಮಿಕ ಸರಬರಾಜು ಗುತ್ತಿಗೆದಾರ ದಂಪತಿ ಮೂಲಕ ಈ ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ.
ದಿನಕ್ಕೆ 12 ಗಂಟೆ ಕಾಲ ದುಡಿಯುವ ಇವರಿಗೆ ತಿಂಗಳಿಗೆ 7,500 ರೂ. ಸಂಬಳ ನೀಡುತ್ತಿದ್ದಾರೆ. ಓವರ್ ಟೈಮ್ ಸಂಬಳವೂ ಇಲ್ಲ, ಪಿಎಫ್, ಇಎಸ್ಐ ಸೌಲಭ್ಯವೂ ಇಲ್ಲ. ಅಲ್ಲದೆ ಒಂದು ದಿನ ರಜೆ ಪಡೆದ್ದಲ್ಲಿ 300 ರೂ. ಕಡಿತ. ವಸತಿಯಿಂದ ಫಿಶ್ ಮಿಲ್ಗೆ, ಫಿಷ್ ಮಿಲ್ನಿಂದ ವಸತಿಗೆ ಗುತ್ತಿಗೆದಾರನೇ ಸಾಗಿಸುತ್ತಾನೆ.
ಲಾಕ್ಡೌನ್ ಅವಧಿಯಲ್ಲಿ ಮೊದಲು ಕೆಲವು ದಿನಗಳ ಕಾಲ ಇಲ್ಲಿ ಕೆಲಸ ಇರಲಿಲ್ಲ. ಆ ಬಳಿಕ ಈ ಕಾರ್ಮಿಕರನ್ನು ದುಡಿಸಲಾಗಿದೆ. ಆದರೆ ಮೂರು ತಿಂಗಳ ಸಂಬಳ ನೀಡಿಲ್ಲ. ಸಂಬಳ ಕೇಳಿದರೆ ಬೆದರಿಸಲಾಗುತ್ತದೆ. ಸಂಬಳ ಕೊಡದ ಕಾರಣ ಕಾರ್ಮಿಕರು ಕೆಲಸಕ್ಕೆ ಹೋಗುತ್ತಿಲ್ಲ. ಪರಿಣಾಮ ಇದೀಗ ಎಲ್ಲರೂ ಹಸಿವಿನಿಂದ ಕಂಗಾಲಾಗಿದ್ದಾರೆ. ಇದು ಅಕ್ಷರಶಃ ಜೀತ ಪದ್ಧತಿ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಹಸಿದಿದ್ದ ಕಾರ್ಮಿಕರಿಗೆ ದಿನಸಿ ಏರ್ಪಾಡು ಮಾಡುವಂತೆ ಡಿವೈಎಫ್ಐ ಕಾರ್ಯಕರ್ತರಾದ ಅಬೂಬಕ್ಕರ್ ಬಾವ, ರಾಜು, ಇಕ್ಬಾಲ್ ಮತ್ತಿತರರು ಗುತ್ತಿಗೆದಾರನನ್ನು ಸಂಪರ್ಕಿಸಿದ್ದಾರೆ. ಮೊದಲು ಈ ಬಗ್ಗೆ ನಕಾರಾತ್ಮವಾಗಿ ಮಾತನಾಡಿದ್ದರೂ, ಬಳಿಕ ವಾರದೊಳಗಡೆ ಬಾಕಿ ಸಂಬಳ ಪಾವತಿಸುವ ಭರವಸೆ ನೀಡಿದ್ದಾನೆ. ಆದರೆ ವಾರ ಕಳೆದರೂ ಇನ್ನೂ ಸಂಬಳ ಪಾವತಿಯಾಗಿಲ್ಲ. ಆದ್ದರಿಂದ ಕಾರ್ಮಿಕರನ್ನು ದುಡಿಸಿ ಸಂಬಳ ನೀಡದೆ ಜೀತದಾಳುಗಳಂತೆ ಕಾಣುತ್ತಿರುವ ಈ ಮೀನು ಸಂಸ್ಕರಣಾ ಘಟಕದ ಕಂಪನಿಯ ವಿರುದ್ಧ ತೀವ್ರ ಹೋರಾಟ ನಡೆಸಲಾಗುತ್ತದೆ ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.