ಮಂಗಳೂರು: ಕ್ರೈಸ್ತರು ಪ್ರೀತಿಯಿಂದ ಮತಾಂತರ ಮಾಡುತ್ತಾರೆ. ಯಾರಲ್ಲಿ ಯಾವುದರ ಕೊರತೆ ಇದೆಯೋ ಅದನ್ನು ಪ್ರೀತಿಯಿಂದ ನೀಡಿ ಮತಾಂತರಿಸುತ್ತಾರೆಯೇ ಹೊರತು ಬಂದೂಕು ತೋರಿಸಿ, ಬೆದರಿಸಿ ಮತಾಂತರ ಮಾಡುವುದಿಲ್ಲ ಎಂದು ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೋ ನಗರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಹೇಳಿದರು.
ಅನ್ನ ಇಲ್ಲದವರಿಗೆ ಅನ್ನ ಕೊಟ್ಟು, ರಕ್ತ ಇಲ್ಲದವರಿಗೆ ರಕ್ತ ಕೊಟ್ಟು, ಮನೆ ಇಲ್ಲದವರಿಗೆ ಮನೆ ಕೊಟ್ಟು, ಕಣ್ಣಿಲ್ಲದವರ ಸೇವೆ ಮಾಡುವ ಮೂಲಕ ಮತಾಂತರ ಮಾಡುತ್ತೇವೆ. ಪ್ರೀತಿಯನ್ನು ಕೊಟ್ಟು ಮತಾಂತರ ಮಾಡುವವರು ಕ್ರೈಸ್ತರು. ಎಕೆ47 ತೋರಿಸಿ ಬೆದರಿಸಿ ಮತಾಂತರ ಮಾಡಬೇಕೆಂದಿಲ್ಲ. ಏಸು ಕ್ರಿಸ್ತರು ಪ್ರೀತಿ, ಶಾಂತಿಯಿಂದಿದ್ದು, ಸತ್ಯವನ್ನು ಹೇಳಿ ಸಮಾಜ ಕಟ್ಟಿ ಎಂದು ಸಂದೇಶ ಕೊಟ್ಟಿದ್ದಾರೆ. ನಾವು ಅದನ್ನೇ ಮಾಡುತ್ತಿದ್ದೇವೆ ಎಂದು ಅಲ್ಫಾನ್ಸೊ ಫ್ರಾಂಕೋ ಹೇಳಿದರು.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: 8 ಯುಎನ್ ಶಾಂತಿಪಾಲಕರಲ್ಲಿ 6 ಪಾಕಿಸ್ತಾನಿ ಸೇನಾ ಸೈನಿಕರು ಸಾವು!
ನಮ್ಮದು ದಿಲ್ ಕಿ ಬಾತ್: ಈ ದೇಶ ನಮ್ಮದು, ನಾವೆಲ್ಲಾ ಹಿಂದೂಗಳೊಂದಿಗೆ ಬೆಳೆದವರು, ಹಿಂದೂಗಳೊಂದಿಗೆ ಕುಳಿತವರು, ಅವರ ಪ್ರೀತಿ ಗಳಿಸಿದವರು. ಆದರೆ ಬಜರಂಗದಳ, ಶ್ರೀರಾಮಸೇನೆಯಂತಹ ಸಂಘಟನೆಯೊಂದಿಗೆ ಇದ್ದವರಲ್ಲ. ನಮ್ಮದು ಹಿಂದುತ್ವವಲ್ಲ. ಆದರೆ ಹಿಂದೂ ಪ್ರೀತಿ-ಪ್ರೇಮಗಳ ಮಿಲನದ ಸಂಕೇತ ನಾವು. ನಮ್ಮದು ಮನ್ ಕೀ ಬಾತ್ ಅಲ್ಲ, ದಿಲ್ ಕೀ ಬಾತ್ ಎಂದು ಅಲ್ಫಾನ್ಸೊ ಫ್ರಾಂಕೋ ತಿಳಿಸಿದರು.