ಬಂಟ್ವಾಳ: ವಿಟ್ಲ ವಲಯ ಎಸ್‌ಡಿಪಿಐ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒಂದೆಡೆ ಎಸ್‌ಡಿಪಿಐ ಪಕ್ಷ ಒತ್ತಡ ಹೇರುತ್ತಿದ್ದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಹಿಂದು ಸಂಘಟನೆ ಮುಖಂಡರ ವಿರುದ್ಧ ದೂರು ದಾಖಲಾಗಿದೆ.
ಸೋಮವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಭಾನುವಾರ ರಾತ್ರಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಕಚೇರಿಯ ಮುಂಭಾಗದ ಬಾಗಿಲಿನ ಭಾಗಕ್ಕೆ ಬೆಂಕಿ ಹಚ್ಚಿದ್ದು, ಸ್ಥಳದಲ್ಲಿ ಪೇಂಟ್ ಡಬ್ಬಗಳು ಪತ್ತೆಯಾಗಿದ್ದವು. ಪೇಂಟ್ ಹಚ್ಚಿ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿತ್ತು.
ಓದಿ-ಕಚೇರಿಗೆ ಬೆಂಕಿ ಹಚ್ಚಿದ ಘಟನೆಗೆ ಬಿಜೆಪಿ, ಸಂಘಪರಿವಾರದ ಷಡ್ಯಂತ್ರವೇ ಕಾರಣ : ಎಸ್‌ಡಿಪಿಐ ಆರೋಪ
ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಸ್‌ಡಿಪಿಐ ವಿರುದ್ಧ ಪ್ರಚೋದನೆ ನೀಡಿದ ಆರೋಪದಡಿ ಅಕ್ಷಯ ರಜಪೂತ, ಕಲ್ಲಡ್ಕ ಯಾನೆ, ಅಕ್ಷಯ್ ಆರ್ಯನ್, ರಾಥೋಡ್ ಮತ್ತು ಇತರರ ಮೇಲೆ ವಿಟ್ಲ ಠಾಣೆಗೆ ಅಬ್ದುಲ್ ರಹಿಮಾನ್ ಎಂಬವರು ದೂರು ನೀಡಿದ್ದಾರೆ. ಜನ ವಾಸವಿರುವ ಕಟ್ಟಡಕ್ಕೆ ಬೆಂಕಿ ಇಟ್ಟು ಸುಟ್ಟು ಹಾಕುವ ಪ್ರಯತ್ನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.