ಮಂಗಳೂರು: ರಾಜ್ಯದ 53 ದೇವಸ್ಥಾನಗಳಲ್ಲಿನ ಸಿಬ್ಬಂದಿಗೆ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ .
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವಸ್ಥಾನಗಳ ಆದಾಯದ 35 ಶೇಕಡಾ ಮೀರದಂತೆ ವೇತನ ನೀಡುವಂತೆ ನಿಯಮವಿದೆ. ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡುವಂತೆ ಸಿಬ್ಬಂದಿ ಹಲವು ಸಮಯದಿಂದ ಒತ್ತಾಯಿಸಿದ್ದಾರೆ. ಅದರಂತೆ 53 ದೇವಸ್ಥಾನದ ಸಿಬ್ಬಂದಿಗೆ ಆರನೇ ವೇತನ ನೀಡಲು ನಿರ್ಧರಿಸಲಾಗಿದೆ. ಇದರಿಂದ 1100 ಸಿಬ್ಬಂದಿ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಇನ್ನು, 100 ದೇವಸ್ಥಾನಗಳಲ್ಲಿ ಸಾಮೂಹಿಕ ಮದುವೆ ಮಾಡಲು ನಿರ್ಧರಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ನೀತಿ ಸಂಹಿತೆ ಇರುವ ಪ್ರದೇಶಗಳ ದೇವಸ್ಥಾನದ ಪಟ್ಟಿಯನ್ನು ಚುನಾವಣಾ ಆಯೋಗದ ಅನುಮತಿ ಪಡೆದು ಪ್ರಕಟಿಸಲಾಗುವುದು. ಈ ವರ್ಷದಲ್ಲಿ 1 ಸಾವಿರ ಜೋಡಿಗಳಿಗೆ ಸಾಮೂಹಿಕ ಮದುವೆ ನಡೆಯುವ ವಿಶ್ವಾಸವಿದೆ ಎಂದರು.