ಬಂಟ್ವಾಳ: ದ.ಕ. ಜಿಲ್ಲೆಯ 6ನೇ ಪ್ರಕರಣ ಸಜೀಪನಡುವಿನ ಗ್ರಾಮದ 10 ತಿಂಗಳ ಮಗುವಿಕೆ ಕೋವಿಡ್-19 ಇರುವುದ ದೃಢಪಟ್ಟ ಹಿನ್ನೆಲೆ ಸದ್ಯ ಈಡೀ ಗ್ರಾಮವನ್ನೇ ಕ್ವಾರಂಟೈನ್ ಮಾಡಬೇಕಾದ ಪ್ರಸಂಗ ಎದುರಾಗಿದೆ.
ಅದಕ್ಕಾಗಿ ಸದ್ಯ ಯಾವುದೇ ವ್ಯಕ್ತಿಗಳು ಗ್ರಾಮದಿಂದ ಹೊರಗೆ ಹಾಗೂ ಗ್ರಾಮದ ಒಳಗೆ ಪ್ರವೇಶಿಸುವಂತಿಲ್ಲ. ಇದನ್ನು ನಿಭಾಯಿಸಲು ತಾಲೂಕಾಡಳಿತ ಮತ್ತು ಸ್ಥಳೀಯಾಡಳಿತ ಸಕಲ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಸಜೀಪನಡು ಗ್ರಾಮದ ಮೂಲಕ ಹಾದು ಹೋಗುವ ಎಲ್ಲಾ ವಾಹನಗಳನ್ನು ನಿರ್ಬಂಧಿಸಲಾಗಿದೆ.
ಬಂಟ್ವಾಳ ತಾಲೂಕಿನ ಮೇಲ್ಕಾರ್ ಮೂಲಕ ಕೊಣಾಜೆಗೆ ತೆರಳುವ ಮುಖ್ಯ ದಾರಿ ಇದಾಗಿದ್ದು, ಪ್ರತಿಯೊಂದು ಮನೆಗಳ ಆರೋಗ್ಯ ಸುರಕ್ಷತೆಯ ನಿಗಾವನ್ನು ಸ್ಥಳೀಯ ಆಶಾ ಕಾರ್ಯಕರ್ತೆಯರ ನೆರವಿನಿಂದ ಬಂಟ್ವಾಳ ಆರೋಗ್ಯ ಇಲಾಖೆ ಇರಿಸಲಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಯು.ಟಿ.ಖಾದರ್ ತುರ್ತು ಸಭೆಯೊಂದನ್ನು ಸಜೀಪನಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆಸಿದರು.
ಕೊರೊನಾ ಸೋಂಕು ಸಜೀಪನಡು ಗ್ರಾಮದ ಮಗುವಿಗೆ ತಗುಲಿದ ಹಿನ್ನೆಲೆಯಲ್ಲಿ ಆಸುಪಾಸಿನ ಗ್ರಾಮಗಳಲ್ಲೂ ಕಟ್ಟೆಚ್ಚರ ವಿಧಿಸಲಾಗಿದ್ದು, ಗ್ರಾಮದಿಂದ ತುಂಬೆ ಡ್ಯಾಂ ಪ್ರವೇಶಿಸುವ ಜಾಗದಲ್ಲಿ ತಡೆ ಗೇಟನ್ನು ಶುಕ್ರವಾರ ರಾತ್ರಿ ಹಾಕಲಾಯಿತು. ಈಗಾಗಲೇ ಸಜೀಪನಡು ಗ್ರಾಮದ ಎಲ್ಲಾ ಸಂಪರ್ಕಗಳನ್ನು ಬಂದ್ ಮಾಡಲಾಗಿದ್ದು, ಆಸುಪಾಸಿನ ಗ್ರಾಮಗಳಲ್ಲೂ ಜಾಗ್ರತಿ ಮೂಡಿಸಲಾಗುತ್ತಿದೆ.