ಮಂಗಳೂರು: ಭೂಕುಸಿತ, ನೆರೆ ಇನ್ನಿತರ ಭೀತಿಯಿರುವ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತಕ್ಷಣ ಸ್ಥಳಾಂತರಿಸಲು ಒತ್ತಾಯಿಸಬೇಕು. ಅವರು ಹೋಗದಿದ್ದಲ್ಲಿ ಪೊಲೀಸ್ ದೂರು ನೀಡಿಯಾದರೂ ಅವರನ್ನು ಸ್ಥಳಾಂತರಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ದ.ಕ.ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಮಳೆಹಾನಿ ಪರಿಹಾರ ಸಂಬಂಧ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನಾವು ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಹೇಳಿದ್ದೆವು. ಆದರೆ, ಅವರು ಹೋಗಿಲ್ಲ ಎಂದು ಅಧಿಕಾರಿಗಳು ಸಬೂಬು ನೀಡುವಂತಿಲ್ಲ. ಇದನ್ನು ಎಲ್ಲಾ ಎಸಿ, ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯವರು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಕೊಡಗಿನಲ್ಲಾದ ಘಟನೆ ಮತ್ತೆ ಮರುಕಳಿಸಬಾರದು. ಇದರಿಂದ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಕೆಟ್ಟ ಹೆಸರು ಬರುತ್ತದೆ. ಮಳೆ ಬರುವ ಸಂದರ್ಭ ಶಾಲಾ ಕಾಲೇಜುಗಳಿಗೆ ಹೊಂದಿಕೊಂಡಂತೆ ಸಂತ್ರಸ್ತರಿಗೆ ಕಾಳಜಿ ಕೇಂದ್ರವನ್ನು ತೆರೆಯಲು ಯೋಜನೆ ಹಾಕಿಕೊಳ್ಳಲಾಗುತ್ತದೆ. ಹಿಂದಿನ ಸರ್ಕಾರ ಅವಘಡವಾದ ಮೇಲೆ ಹಣ ಬಿಡುಗಡೆ ಮಾಡುತ್ತಿತ್ತು. ನಾವು ಮುಂಜಾಗ್ರತಾ ಕ್ರಮವನ್ನು ಅನುಸರಿಸಿ, ಏನಾದರೂ ಆಗೋದಕ್ಕಿಂತ ಮೊದಲೇ ಹಣ ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೇ ದ.ಕ.ಜಿಲ್ಲೆಯಲ್ಲಿ ಮಳೆ ಹಾನಿಗೆಂದು 23 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ಅದಕ್ಕೆ ಹೆಚ್ಚುವರಿಯಾಗಿ ಮತ್ತೆ 5 ಕೋಟಿ ರೂ. ನೀಡಲಾಗುತ್ತಿದೆ. ಕೋವಿಡ್ ಸೋಂಕು, ಮನೆ ಹಾನಿ ದುರಸ್ತಿಗೆ ಪ್ರತ್ಯೇಕವಾಗಿ ಪರಿಹಾರ ನೀಡಲಾಗುತ್ತಿದೆ. ಮನೆಯೊಳಗೆ ಒಂದಿಂಚು ನೀರು ಹೋದಲ್ಲಿಯೂ 10 ಸಾವಿರ ರೂ. ಪರಿಹಾರ ನೀಡಬೇಕು. ಉಳಿದಂತೆ ಭೂಕುಸಿತ, ಮರ ಬಿದ್ದು ಹಾನಿ, ಮೇಲ್ಛಾವಣಿ ಕುಸಿತಕ್ಕೂ ಇದೇ ರೀತಿ ಪರಿಹಾರ ಒದಗಿಸಬೇಕು. ಅದು ಗೈಡ್ಲೈನ್ಸ್ನಲ್ಲಿ ಇಲ್ಲ ಎಂದು ಸಂತ್ರಸ್ತರನ್ನು ಸತಾಯಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾಳಜಿ ಕೇಂದ್ರದಲ್ಲಿ ಯಾವುದೇ ತರಹದ ತೊಂದರೆಯಾಗದ ರೀತಿಯಲ್ಲಿ ಬಡವರಿಗೆ ವ್ಯವಸ್ಥೆ ಮಾಡಬೇಕು. ಊಟಕ್ಕೆ ಅನ್ನ-ಸಾರು ಮಾತ್ರವಲ್ಲದೆ. ಪಲ್ಯ, ಉಪ್ಪಿನಕಾಯಿ, ಹಪ್ಪಳ, ಮೊಟ್ಟೆ ಕಡ್ಡಾಯವಾಗಿ ನೀಡಬೇಕು. ಯಾವುದೇ ರೀತಿಯ ಜಿಪುಣತನ ಬೇಡ. ಪ್ರತಿನಿತ್ಯ ವೈವಿಧ್ಯಮಯ ಆಹಾರವಿರಲಿ. ಕೋವಿಡ್ ಸಂದರ್ಭದಲ್ಲಿ ನೀಡಿರುವ ಆಹಾರ ಪದಾರ್ಥಗಳನ್ನು ಅನುಸರಿಸಿ, ಮಳೆಗಾಲದ ಹವಾಗುಣಕ್ಕೆ ಅನುಗುಣವಾದ ಆಹಾರಗಳನ್ನು ಒದಗಿಸಿ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ವಾರದಿಂದ ಸುರಿದ ಮಳೆಗೆ ನನ್ನ ಕ್ಷೇತ್ರದಲ್ಲಿ ನೆರೆ ಹಾವಳಿಯಾಗಿದೆ. ಇದರಿಂದ ಬಹಳಷ್ಟು ತೋಟಗಳಿಗೆ ನೀರು ನುಗ್ಗಿದ್ದು, ಗದ್ದೆಗಳಲ್ಲಿರುವ ಬೆಳೆಯೂ ನಾಶವಾಗಿದೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಕಳೆದ ಬಾರಿ ಅಡಿಕೆ ಮರ ಹಾನಿಯಾಗಿದ್ದಕ್ಕೆ ನೀಡಿದ್ದ ಹಣ ಯಾವುದಕ್ಕೂ ಸಾಲೋದಿಲ್ಲ ಎಂದರು. ಇದಕ್ಕೆ ಸಚಿವ ಅಶೋಕ್ ಪ್ರತಿಕ್ರಿಯಿಸಿ, ಇದು ನಾನು ಮಾಡಿದ್ದಲ್ಲ. ಕೇಂದ್ರ ಸರ್ಕಾರದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಈ ಬಾರಿ ಹೆಚ್ಚು ಮಾಡಲು ಸಾಧ್ಯವಾಗುತ್ತದೆಯೇ ಎಂದು ನೋಡುತ್ತೇನೆ ಎಂದು ತಿಳಿಸಿದರು.