ಮಂಗಳೂರು: ನಗರದ ಹೊರವಲಯದಲ್ಲಿರುವ, ಗಂಜಿಮಠ ಸಮೀಪದ ಮಳಲಿಯ ದರ್ಗಾ ನವೀಕರಣದ ವೇಳೆ ಹಿಂದು ದೇವಾಲಯದ ರೀತಿಯ ಕೆತ್ತನೆಯ ಕುರುಹುಗಳು ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.
ನಿನ್ನೆಯೇ ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ನಾನು ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದೆ. ಈ ಬಗ್ಗೆ ತಹಶೀಲ್ದಾರ್ ಅವರು ದರ್ಗಾದ ಆಡಳಿತ ಕಮಿಟಿ ಹಾಗೂ ಎರಡೂ ಗುಂಪುಗಳೊಂದಿಗೆ ಮಾತನಾಡಿದ್ದಾರೆ. ಅಲ್ಲದೆ ದರ್ಗಾದ ದಾಖಲೆಗಳ ಮೂಲಕ ಪರಿಶೀಲನೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸುವುದಾಗಿ ಹೇಳಿದ್ದಾರೆ ಎಂದರು.
ಆ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಬಹಳಷ್ಟು ಅನ್ಯೋನ್ಯವಾಗಿದ್ದಾರೆ. ಆದ್ದರಿಂದ ಎರಡೂ ಸಮುದಾಯದವರು ಜಿಲ್ಲಾಡಳಿತ ಈ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಾರ್ವಜನಿಕರು ಹೇಳಿದ್ದಾರೆ. ವಾರಗಳ ಕಾಲ ದರ್ಗಾ ನವೀಕರಣ ಕಾರ್ಯವನ್ನು ತಹಶೀಲ್ದಾರ್ ಸ್ಥಗಿತಗೊಳಿಸಲು ಸೂಚಿಸಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹಿಜಾಬ್ ಹೈಡ್ರಾಮಾ: ವಿದ್ಯಾರ್ಥಿನಿಯರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಉಡುಪಿ ಶಾಸಕ