ಮಂಗಳೂರು: ಹರಿಯಾಣದ ಜನತೆ ಚೌಟಾಲ ಕುಟುಂಬವನ್ನೇ ತಿರಸ್ಕಾರ ಮಾಡಬೇಕು ಎಂದು ಚುನಾವಣಾ ಪೂರ್ವದಲ್ಲಿ ಪ್ರಧಾನಿ ಮೋದಿಯವರು ಹೇಳಿದ್ದು, ಇದೀಗ ಚೌಟಾಲರ ಮೊಮ್ಮಗನನ್ನೇ ಉಪ ಮುಖ್ಯಮಂತ್ರಿ ಮಾಡಿದ್ದಾರೆ. ಇದು ಮೋದಿಯವರ ರಾಜಕೀಯ ದಿವಾಳಿತನ ಎಂದು ಮಾಜಿ ಸಚಿವ ರಮಾನಾಥ ರೈ ಟೀಕಿಸಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರಕ್ಕೆ ಹಾತೊರೆಯುವವರು. ಚುನಾವಣೆ ಗೆಲ್ಲದೆ ಪ್ರಧಾನಿಯಾಗಬಹುದೆಂದು ಅವರ ಪಕ್ಷದವರು ಹೇಳಿಕೆ ನೀಡುತ್ತಾರೆ. ಅದು ಹೇಗೆ ಎಂದು ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಈ ಬಾರಿ ಬಿಜೆಪಿ ಸರ್ಕಾರ ಚುನಾಯಿತ ಸದಸ್ಯರನ್ನೇ ಮಂತ್ರಿಯಾಗಿ ನೇಮಕ ಮಾಡಿಲ್ಲ. ಅವರಿಗೆ ಜನರ ಬಗ್ಗೆ ಯಾವ ರೀತಿಯ ಕಾಳಜಿ ಇದೆ ಎಂಬುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಪುರಸಭೆಯ ಮತದಾನ ಮುಗಿದರೂ ಇನ್ನೂ ಅಧ್ಯಕ್ಷರ, ಉಪಾಧ್ಯಕ್ಷರ ನೇಮಕವಾಗಿಲ್ಲ. ಅದಕ್ಕೆ ಬಿಜೆಪಿ ನೇರ ಹೊಣೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಬಿಜೆಪಿ ಆಡಳಿತಕ್ಕೆ ಬಂದರೆ 15 ದಿವಸದೊಳಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡುತ್ತೇವೆ ಎಂದಿದ್ದರು. ಆದರೆ ಇದುವರೆಗೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ವಿರೋಧ ಪಕ್ಷದಲ್ಲಿರುವಾಗ ಟೀಕೆ ಮಾಡಿದವರು, ಈಗ ಆಡಳಿದಲ್ಲಿದ್ದಾರಲ್ಲ ಮಾಡಬಹುದಿತ್ತು. ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿರು. ಗೆದ್ದ ಶಾಸಕರನ್ನು ರಾಜೀನಾಮೆ ಕೊಡಿಸಿದ ಬಿಜೆಪಿಗರು ಸಂಭಾವಿತರೇ ಎಂದು ರಮಾನಾಥ ರೈ ಪ್ರಶ್ನಿಸಿದರು.