ಮಂಗಳೂರು: ವೈಯುಕ್ತಿಕ ದ್ವೇಷ, ದುಡ್ಡಿನ ವ್ಯವಹಾರ ಹಾಗೂ ಗ್ಯಾಂಗ್ ವಾರ್ ಸಂಬಂಧಿಸಿದಂತೆ ಕರಾವಳಿಯಲ್ಲಿ ಕೊಲೆಗಳು ನಡೆಯುತ್ತಿವೆ. ಆದ್ದರಿಂದ ಈ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಯುವಕರಿಗೆ ಸದ್ವಿಚಾರಗಳ ಮೂಲಕ ತಿಳಿಹೇಳಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಸಂಘ ಪರಿವಾರ ಕೈಗೆತ್ತಿಕೊಂಡಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ನಗರದ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್ನ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು, ತಿಂಗಳೊಂದರಲ್ಲಿಯೇ ದ.ಕ.ಜಿಲ್ಲೆಯಲ್ಲಿಯೇ ಮೂರು ಕೊಲೆಗಳು ಸಂಭವಿಸಿದ್ದು, ಒಬ್ಬನ ಹತ್ಯೆಗೆ ಪ್ರತೀಕಾರವಾಗಿ ಮತ್ತೋರ್ವನ ಹಲ್ಲೆ ಎಂದು ಸರಣಿ ಕೊಲೆಗಳು ನಡೆಯುತ್ತಿದೆ. ಆದ್ದರಿಂದ ಈ ಕೃತ್ಯಗಳಿಗೆ ಕಡಿವಾಣ ಹಾಕಲು ಜಾಗೃತಿ ಸಂದೇಶ ಅಗತ್ಯ ಎಂದು ಹೇಳಿದರು.
ಇತ್ತೀಚೆಗೆ ನಡೆಯುವ ಕೊಲೆಗಳ ಹಿಂದೆ ಭೂಗತ ನಂಟಿದೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಈ ಭೂಗತ ನಂಟು ಓರ್ವ ರೌಡಿ ಸೃಷ್ಟಿಸಿಸಬಹುದು. ಇದರಿಂದ ಸಮುದಾಯಕ್ಕೆ ಕಂಟಕವಾಗುತ್ತದೆ. ಇದು ಕೇವಲ ಸಮುದಾಯಕ್ಕೆ ಸೀಮಿತವಾಗಿಲ್ಲ. ಆದ್ದರಿಂದ ಇಂತಹ ಕೃತ್ಯಗಳಲ್ಲಿ ತೊಡಗಿರುವವರಿಗೆ ಜಾಗೃತಿ ಮೂಡಿಸಿ ಸಮಾಜದಲ್ಲಿ ಸುಸಂಸ್ಕೃತ ರೀತಿಯಲ್ಲಿ ಬದುಕಲು ಸಾಧ್ಯವಿದೆ ಎಂಬ ಸುವಿಚಾರದ ಮೂಲಕ ಪ್ರಯತ್ನ ಪಡುತ್ತಿದ್ದೇವೆ ಎಂದರು.
ಈಗಾಗಲೇ ಇದಕ್ಕಾಗಿ ಅವಲೋಕನ ಸಭೆ ಮಾಡಿದ್ದು, ಒಟ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇದು ಬಹು ಸುದೀರ್ಘವಾದ ಕಾರ್ಯ ಇದಾಗಿದ್ದು, ಇಂದು ನಾಳೆಗೆ ಮುಕ್ತಾಯವಾಗುವಂತಹದ್ದಲ್ಲ. ಹಂತ ಹಂತವಾಗಿ ಮುಂದೆ ಕೊಂಡೊಯ್ದು, ಹಾದಿ ತಪ್ಪಿದ ಯುವಕರನ್ನು ಸರಿ ದಾರಿಗೆ ಕರೆತರುವ ಕಾರ್ಯ ಮಾಡಲಾಗುತ್ತದೆ. ಏನೇ ಅಡೆತಡೆಗಳು ಬಂದರೂ ಈ ಕಾರ್ಯವನ್ನು ಕೈ ಬಿಡುವುದಿಲ್ಲ ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.