ಪುತ್ತೂರು : ಸಾಲ ಮರುಪಾವತಿಸದ್ದಕ್ಕೆ ಮನೆ ಮುಟ್ಟಗೋಲು ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಸಮ್ಮುಖದಲ್ಲೇ ಮನೆ ಮಾಲೀಕನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಮೃತಳ ಪತಿ ಬ್ಯಾಂಕ್ ಆಧಿಕಾರಿಗಳ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ರಘವೀರ್ ಪ್ರಭು, ಸಾಲದ ಹಣ ಮರುಪಾವತಿಗೆ ಒನ್ ಟೈಮ್ ಸೆಟಲ್ಮೆಂಟ್ಗೆ ಬ್ಯಾಂಕ್ ಯಾವುದೇ ಅವಕಾಶವನ್ನು ನೀಡಿಲ್ಲ, ಮನೆ ಜಪ್ತಿಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಹಿಳೆಯ ಪತಿ ರಘವೀರ್ ಪ್ರಭು ಆರೋಪಿಸಿದರು. ವ್ಯವಹಾರಕ್ಕೆ ಸಂಬಂಧಿಸಿದಂತೆ 2007 ರಲ್ಲಿ ಪುತ್ತೂರಿನ ಖಾಸಗಿ ಬ್ಯಾಂಕ್ನಿಂದ 6 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು. 3 ಕೋಟಿ ರೂಪಾಯಿ ಮರುಪಾವತಿಯನ್ನೂ ಮಾಡಲಾಗಿತ್ತು. ಬಳಿಕ ವ್ಯವಹಾರದಲ್ಲಿ ಸಂಪೂರ್ಣ ನಷ್ಟ ಅನುಭವಿಸಿದ ಕಾರಣ ಬ್ಯಾಂಕ್ ಸಾಲವನ್ನು ತುಂಬಲಾಗಿಲ್ಲ. ಬ್ಯಾಂಕ್ ಸಾಲ ಪಡೆಯಲು ಮಕ್ಕಳು ಹಕ್ಕು ಹೊಂದಿದ್ದ ಮನೆ ಸೇರಿದಂತೆ ತನ್ನ ಮಾಲೀಕತ್ವದ ಕಟ್ಟಡ ಮತ್ತು ಖಾಲಿ ಜಾಗವನ್ನೂ ಅಡಮಾನವಾಗಿ ಇಡಲಾಗಿತ್ತು. ವ್ಯವಹಾರದಲ್ಲಿ ಸಂಪೂರ್ಣ ನಷ್ಟ ಅನುಭವಿಸಿದ ಕಾರಣಕ್ಕಾಗಿ ಸುಮಾರು 11 ವರ್ಷಗಳ ಕಾಲ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ ಎಂದರು.
ಈ ನಡುವೆಯೇ ಬ್ಯಾಂಕ್ ತನ್ನ ಅಕೌಂಟ್ ಅನ್ನು ಎನ್.ಪಿ.ಎ ಮಾಡಿದ ಕಾರಣ ಬ್ಯಾಂಕ್ ಜೊತೆಗೆ ಯಾವುದೇ ವ್ಯವಹಾರ ಮಾಡದಂತೆಯೂ ಮಾಡಲಾಗಿತ್ತು. ಸಾಲಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಬ್ಯಾಂಕ್ ಸಿಬ್ಬಂದಿ ಸಂಪರ್ಕಿಸಿ ಸೆಟಲ್ಮೆಂಟ್ ಮಾಡಲು ಒತ್ತಾಯ ಮಾಡಲಾಗಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ನೀಡದೆ ಕೇವಲ ಕಾನೂನು ಮೂಲಕವೇ ಸಾಲವನ್ನು ವಸೂಲಿ ಮಾಡುವುದಾಗಿ ಮೊಂಡು ವಾದವನ್ನು ಬ್ಯಾಂಕ್ ಮಾಡಿತ್ತು ಎಂದು ಆರೋಪಿಸಿದರು.
ಈ ನಡುವೆ ಫೆಬ್ರವರಿ 18 ರಂದು ಬ್ಯಾಂಕ್ ಅಧಿಕಾರಿಗಳು ನನ್ನನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಒನ್ ಟೈಂ ಸೆಟಲ್ಮೆಂಟ್ಗೆ ಮಂಗಳೂರು ಕಚೇರಿಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿದ್ದ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿ ಏಕಾಏಕಿ ಮನೆಗೆ ನುಗ್ಗಿ, ಮನೆಯಲ್ಲಿದ್ದ ನನ್ನ ಪತ್ನಿ, ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಮಗಳು ಹಾಗೂ ಮಗನನ್ನು ಹೊರ ತಳ್ಳುವ ಯತ್ನವನ್ನೂ ನಡೆಸಿದ್ದಾರೆ. ಈ ವಿದ್ಯಾಮಾನಗಳನ್ನೆಲ್ಲಾ ಮನೆ ಒಳಗಿಂದ ಗಮನಿಸುತ್ತಿದ್ದ ಪತ್ನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಘವೀರ್ ದೂರಿದರು.
ಇದನ್ನೂ ಓದಿ: ಮನೆ ಮುಟ್ಟುಗೋಲಿಗೆ ಬಂದ ಬ್ಯಾಂಕ್ ಸಿಬ್ಬಂದಿ: ಆತಂಕಗೊಂಡು ಮನೆ ಮಾಲೀಕನ ಪತ್ನಿ ಆತ್ಮಹತ್ಯೆ
ಅಡಮಾನವಾಗಿ ಬೆಲೆಬಾಳುವ ಜಮೀನು ಹಾಗೂ ಕಟ್ಟಡವನ್ನು ಬ್ಯಾಂಕ್ನಲ್ಲಿ ಇರಿಸಿದ್ದರೂ, ಅವುಗಳನ್ನು ಮುಟ್ಟದೆ ನನ್ನ ಮಾನ ಹರಾಜು ಹಾಕುವ ಉದ್ದೇಶದಿಂದ ಮನೆಯನ್ನು ಜಪ್ತಿ ಮಾಡಲು ಬ್ಯಾಂಕ್ ಮುಂದಾಗಿದೆ ಎಂದು ಆರೋಪಿಸಿದ ಅವರು, ಬ್ಯಾಂಕ್ನ ಈ ನಿರ್ಧಾರದಿಂದ ಪತ್ನಿಯನ್ನು ಕಳೆದುಕೊಳ್ಳುವಂತಾಯಿತು. ಮಕ್ಕಳು ಅನಾಥರಾದರು. ಈ ಸಂಬಂಧ ಬ್ಯಾಂಕ್ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.