ಮಂಗಳೂರು: ಪುತ್ತೂರು ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಕಾಲೇಜಿನ ಐವರು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಅತ್ಯಾಚಾರ ಪ್ರಕರಣದ ತನಿಖೆ ನೇತೃತ್ವ ವಹಿಸಿದ್ದ ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆಟ್ಟಿ, ಪುತ್ತೂರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಪುತ್ತೂರು ತಾಲೂಕಿನ ಬಜತ್ತೂರು ಗಾಣದಮನೆ ನಿವಾಸಿ ಗುರುನಂದನ್ (19), ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಪ್ರಜ್ವಲ್ (19), ಕಡಂಬು ನಿವಾಸಿ ಕಿಶನ್ (19), ಪುತ್ತೂರು ತಾಲೂಕಿನ ಆರ್ಯಾಪು ಪಿಲಿಗುಂಡ ನಿವಾಸಿ ಸುನೀಲ್ (19), ಬಂಟ್ವಾಳ ತಾಲೂಕಿನ ಬರಿಮಾರು ಬಲ್ಯ ನಿವಾಸಿ ಪ್ರಖ್ಯಾತ್ (19) ಎಂಬವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.
ಪ್ರಕರಣದ ಬಂಧಿತ ಆರೋಪಿಗಳು ಇದೇ ಮಾರ್ಚ್‌ನಲ್ಲಿ ಸಂತ್ರಸ್ತೆಯನ್ನು ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ, ಮೊಬೈಲ್‌ನಲ್ಲಿ ಘಟನೆಯ ವಿಡಿಯೋ ಚಿತ್ರೀಕರಿಸಿದ್ದರು. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜಿಲ್ಲಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು. ಹಾಗೆಯೇ ವಿಡಿಯೋ ವೈರಲ್ ಮಾಡಿದ್ದ ಆರೋಪದಲ್ಲಿ ಮತ್ತೊಂದು ಪ್ರಕರಣ ದಾಖಲಿಸಿ, ಎಂಟು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.