ಮಂಗಳೂರು: ದಕ್ಷಿಣ ಕನ್ನಡದಲ್ಲಿ ಖಾಸಗಿ ಶಾಲಾ - ಕಟ್ಟಡಗಳು ಅಗ್ನಿ ಸುರಕ್ಷತೆಗೆ ಹೆಚ್ಚು ಆದ್ಯತೆ ಕೊಡುತ್ತಿಲ್ಲ ಎಂಬ ಆಪಾದನೆಗಳು ಕೇಳಿಬರುತ್ತಿವೆ. ರಾಜ್ಯದಲ್ಲಿ ಖಾಸಗಿ ಶಾಲಾ-ಕಾಲೇಜುಗಳು ಅಗ್ನಿ ಸುರಕ್ಷತೆಯ ನೂತನ ಮಾನದಂಡಗಳನ್ನು ಪಾಲಿಸುವಂತೆ ಸರ್ಕಾರ ಸೂಚನೆ ನೀಡಿದ್ದರೂ ಪಾಲಿಸುತ್ತಿಲ್ಲ ಎಂಬ ಮಾತುಗಳು ನಿಜ ಎನ್ನಲಾಗಿದೆ.
ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದ ವೇಳೆಗೆ ಪಾಲಿಸಬೇಕಾದ ನಿಯಮಗಳನ್ನು ಪಟ್ಟಿ ಮಾಡಿ ಶಾಲಾ - ಕಾಲೇಜುಗಳಿಗೆ ಸುತ್ತೋಲೆಗಳನ್ನು ಕಳುಹಿಸಲಾಗಿತ್ತು. ಆದರೆ, ಖಾಸಗಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ನೂತನ ಸುರಕ್ಷತಾ ನಿಯಮಗಳ ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಶಾಲೆಗಳಲ್ಲಿ ಕುಡಿಯುವ ನೀರು, ಶಿಕ್ಷಕರಿಗೆ ಪ್ರತ್ಯೇಕ ಕೊಠಡಿ, ಶೌಚಾಲಯದ ವ್ಯವಸ್ಥೆ ಜೊತೆಗೆ ಅಗ್ನಿ ಸುರಕ್ಷತೆ ಅತ್ಯಗತ್ಯ. ವ್ಯವಹಾರಿಕ ಉದ್ದೇಶದಿಂದ ಶಿಕ್ಷಣ ನೀಡುವ ಕೆಲವು ಖಾಸಗಿ ಸಂಸ್ಥೆಗಳು ಇದನ್ನು ಪಾಲಿಸುವಲ್ಲಿ ವಿಫಲವಾಗುತ್ತಿದೆ ಎನ್ನಲಾಗುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಕುರಿತ ದೂರುಗಳು ಎಲ್ಲೂ ದಾಖಲಾಗಿಲ್ಲ.
ಇದನ್ನೂ ಓದಿ...ಕಂಬಳ ಓಟ: ತಮ್ಮದೇ ದಾಖಲೆ ಮುರಿದ 'ಕಂಬಳ ವೀರ' ಶ್ರೀನಿವಾಸಗೌಡ
ಖಾಸಗಿ ಶಾಲಾ ಕಟ್ಟಡಗಳು ಸ್ಥಳೀಯ ಸಂಸ್ಥೆಗಳು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಸೂಕ್ತ ಅನುಮತಿ ಪಡೆಯಬೇಕಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಅಗ್ನಿಶಾಮಕ ಇಲಾಖೆಯಿಂದ ಆಕ್ಷೇಪಣೆ ಪ್ರಮಾಣಪತ್ರ, ಅನುಸರಣೆ ಪ್ರಮಾಣಪತ್ರ ಮತ್ತು ಸಲಹಾ ಪ್ರಮಾಣಪತ್ರ ಪಡೆಯಬೇಕು. ಅಗ್ನಿ ಸುರಕ್ಷತಾ ಸಾಧನಗಳು ಅವಧಿ ಮುಗಿಯುವ ಮೊದಲೇ ತುಂಬಿಸಬೇಕಾಗಿದೆ ಎನ್ನುತ್ತಾರೆ ಮಂಗಳೂರು ಅಗ್ನಿಶಾಮಕ ದಳದ ಅಧಿಕಾರಿ ತಿಪ್ಪೆಸ್ವಾಮಿ.
ಕೋವಿಡ್ನಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸುತ್ತಿಲ್ಲ ಅಥವಾ ಮೊದಲ ಕಂತಿನ ಶುಲ್ಕ ಸಹ ಪಾವತಿಸಿಲ್ಲ. ಸರ್ಕಾರ ಆರ್ಟಿಇ ಶುಲ್ಕವನ್ನು ಮರುಪಾವತಿಸಿಲ್ಲ. ಹೀಗಾಗಿ, ಈಗಲೇ ನಷ್ಟದಲ್ಲಿರುವ ನಾವು ಇಲಾಖೆ ಸೂಚಿಸಿದ ಹೊಸ ಮಾನದಂಡಗಳನ್ನು ಅಳವಡಿಸಲು ಹೇಗೆ ಸಾಧ್ಯ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳುತ್ತಿವೆ.