ಮಂಗಳೂರು: ಜೂನ್ 1 ರಿಂದ ದೇವಸ್ಥಾನಗಳಿಗೆ ಭಕ್ತರು ಪ್ರವೇಶಿಸಬಹುದು ಎಂದು ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಕೆಲ ಪೂರ್ವ ಸಿದ್ಧತೆ ಕಾರ್ಯ ಕೈಗೊಳ್ಳಲಿದ್ದು ಸ್ಯಾನಿಟೈಸೇಷನ್ ಮಾಡುತ್ತೇವೆ ಎಂದು ಕುದ್ರೋಳಿ ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.
ಜೂನ್ 1 ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಭಕ್ತರು ಬರಲು ಯಾವುದೇ ನಿರ್ಬಂಧ ಇಲ್ಲ. ಆದರೆ ದೇವಾಲಯ ಪ್ರವೇಶಕ್ಕೆ ಮುನ್ನ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಲಿದೆ. ಅಲ್ಲದೇ ಕೊರೊನಾ ಮಹಾಮಾರಿ ಬೇಗ ಶಮನವಾಗಲು ಜೂನ್ 1 ರಂದು ದೇವಳದಲ್ಲಿ ಬೆಳಗ್ಗೆ 8.30 ಕ್ಕೆ ಧನ್ವಂತರಿ ಹೋಮ ನಡೆಸಲಿದ್ದೇವೆ. ಅದೇ ರೀತಿ ಗೋಕರ್ಣನಾಥ ಶತ ಸೀಯಾಳಾಭಿಷೇಕ ನಡೆಸಲಿದ್ದೇವೆ ಎಂದು ಹೇಳಿದರು.
ಕೊರೊನಾ ಸೋಂಕಿನ ನಿಯಂತ್ರಿಸಲು ಸರ್ಕಾರ ಮಸೀದಿ, ಚರ್ಚ್, ದೇವಸ್ಥಾನಕ್ಕೆ ಜನರು ಆಗಮಿಸುವುದಕ್ಕೆ ನಿರ್ಬಂಧ ಹೇರಿತ್ತು. ಆ ಪ್ರಕಾರ ನಾವು ಕೂಡ ಮಾರ್ಚ್ 22 ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭಕ್ತರು ಆಗಮಿಸುವುದಕ್ಕೆ ನಿರ್ಬಂಧ ಹೇರಿದ್ದೆವು. ದೇವಳದ ಸಿಬ್ಬಂದಿ ಹಾಗೂ ಪುರೋಹಿತರು ಮಾತ್ರ ಇದ್ದು ತ್ರಿಕಾಲ ಪೂಜೆ ನೆರವೇರುತ್ತಿತ್ತು ಎಂದು ಪದ್ಮರಾಜ್ ಆರ್. ಹೇಳಿದರು.