ಮಂಗಳೂರು: ದ.ಕ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ ಎಂಬ ಭೀತಿ ಬೇಡ. ಜೂನ್ 10ಕ್ಕಿಂತ ಮೊದಲು ಜಿಲ್ಲೆಯ ಪಾಸಿಟಿವಿಟಿ ರೇಟ್ ಶೇ. 18 ಇದ್ದು, ಈಗ ಅದು ಶೇ. 8.5ಕ್ಕೆ ಇಳಿದಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಹೇಳಿದರು.
ಅಶಕ್ತರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡುವ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲು ಪ್ರತಿದಿನ 2500-3500 ಮಂದಿಗೆ ಸೋಂಕು ತಪಾಸಣೆ ಮಾಡಲಾಗುತ್ತಿತ್ತು. ನಿನ್ನೆ ದಾಖಲೆಯ 11 ಸಾವಿರ ಮಂದಿಗೆ ಸೋಂಕು ತಪಾಸಣೆ ಮಾಡಲಾಗಿದೆ. ಅಂದರೆ ನಾಲ್ಕು ದಿನಗಳ ಕಾಲ ನಡೆಯುವ ತಪಾಸಣೆ ಒಂದೇ ದಿನ ಮಾಡಲಾಗಿದೆ. ಆದ್ದರಿಂದ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿದೆ. ಆದರೆ ಪಾಸಿಟಿವಿಟಿ ರೇಟ್ ಕಡಿಮೆ ಆಗುತ್ತಿರುವುದರಿಂದ ಯಾರೂ ಈ ಬಗ್ಗೆ ಭೀತಿಗೊಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕಠಿಣ ಲಾಕ್ಡೌನ್ ಜಾರಿಗೊಳಿಸುವ ಮಧ್ಯೆಯೇ ಮುಂದಿನ ದಿನಗಳಲ್ಲಿ ಅನ್ಲಾಕ್ ಮಾಡುವ ಚಿಂತನೆ ನಡೆಸಬೇಕಾಗಿದೆ. ಆದ್ದರಿಂದ ಈ ಬಗ್ಗೆ ಇಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು.
ಮನೆಗೆ ತೆರಳಿ ಲಸಿಕೆ ನೀಡುವ ಅವಕಾಶ ಇಲ್ಲದಿದ್ದರೂ ದ.ಕ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಲ್ಲದೆ ದೀರ್ಘಕಾಲದ ಕಾಯಿಲೆಯಿಂದ ಮಲಗಿದಲ್ಲೇ ಇದ್ದು, ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಲು ಅಶಕ್ತರಾದವರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡುವ ವಾಹನದ ವ್ಯವಸ್ಥೆ ಮಾಡಲಾಗಿದೆ. ರೆಡ್ ಕ್ರಾಸ್ ಈ ವಾಹನದ ವ್ಯವಸ್ಥೆ ಮಾಡಿದೆ. ಈ ವಾಹನದ ಮೂಲಕ ವೈದ್ಯರ ತಂಡ ಅಶಕ್ತರ ಮನೆಗೆ ತೆರಳಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಕೆ.ವಿ.ರಾಜೇಂದ್ರ ಹೇಳಿದರು.